ಶಿವಮೊಗ್ಗ : ಜೂನ್ 20 : ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಕೈಗೊಳ್ಳಲಾಗಿರುವ ರೈಲ್ವೇ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿಗಧಿಪಡಿಸಿದ ಕಾಲಮಿತಿಯಲ್ಲಿ ಪೂರ್ಣವಾಗದಿರುವುದು ಅತ್ಯಂತ ಬೇಸದರ ಸಂಗತಿಯಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕೈಗೊಂಡ ಕಾಮಗಾರಿಗಳಿಗೆ ವೇಗ ಹೆಚ್ಚಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾಧೀನ, ಅರಣ್ಯ ಸಂಬಂಧಿ ಸಮಸ್ಯೆಗಳು ಹಾಗೂ ಮತ್ತು ರೈಲ್ವೇ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಿವಮೊಗ್ಗ ತಾಲೂಕಿನ ಕುಂಸಿಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಇಟ್ಟುಕೊಂಡಿದ್ದ ಅಲ್ಪ-ಸ್ವಲ್ಪ ಭೂಮಿಯನ್ನು ತಮ್ಮ ಕೋರಿಕೆಯ ಮೇರೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಬಿಟ್ಟುಕೊಡಲು ಮುಂದಾಗಿದ್ದಾರೆ. ಅಂತಹ ರೈತರೊಂದಿಗೆ ಅಧಿಕಾರಿಗಳು ಸ್ನೇಹಪೂರ್ವಕವಾಗಿ ವ್ಯವಹರಿಸದಿರುವುದು ಸರಿಯಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹೆದ್ದಾರಿ ಹಾದುಹೋಗುವ ಪ್ರದೇಶಗಳ ವ್ಯಾಪ್ತಿಗೊಳಪಡುವ ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಸಮಾಲೋಚನೆ ನಡೆಸಬೇಕು. ತಮಗೆ ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಬೇಕು. ಅಲ್ಲದೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರ ಸಮಸ್ಯೆಗಳನ್ನು ಆಲಿಸಿ, ಅದರ ಪರಿಹಾರಕ್ಕಾಗಿ ಸಮಾಧಾನಕರ ರೀತಿಯಲ್ಲಿ ವ್ಯವಹರಿಸಬೇಕು ಎಂದವರು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇ ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾದೀನ ಪ್ರಕ್ರಿಯೆ ಕೈಗೊಳ್ಳುವ ಮುನ್ನ ಜಮೀನಿನ ಪೋಡಿ ಕಾರ್ಯ ಮುಕ್ತಾಯಗೊಳಿಸುವಲ್ಲಿ ಅಧಿಕಾರಿಗಳು ಆದ್ಯತೆಯಾಗಿ ಕ್ರಮವಹಿಸಬೇಕು. ದಾಖಲೆಗಳನ್ನು ಸಂಗ್ರಹಿಸುವ ಅಧಿಕಾರಿಗಳು ಜಮೀನಿನಲ್ಲಿನ ಆಸ್ತಿ ಹಾಗೂ ಅದರ ನಷ್ಟವನ್ನು ಸರಿಯಾದ ಪ್ರಮಾಣದಲ್ಲಿ ಅಂದಾಜು ಮಾಡಿ, ಹೆಚ್ಚಿನ ಪ್ರಮಾಣದ ಪರಿಹಾರ ಕೊಡಿಸುವಲ್ಲಿಯೂ ಗಮನಹರಿಸಬೇಕೆಂದ ಅವರು, ಈ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಅನಗತ್ಯ ಕಾಲವಿಳಂಬ ಮಾಡದೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ಪೂರಕವಾಗಿ ಸಹಕರಿಸದೆ ಇರುವ ರೈತರ ಭೂಸ್ವಾದೀನದ ಒಟ್ಟು ಮೊತ್ತವನ್ನು ನ್ಯಾಯಾಲಯದ ಮೂಲಕ ಪಾವತಿಸಿ, ಕಾರ್ಯಾರಂಭಗೊಳಿಸುವಂತೆಯೂ ಅವರು ಸಲಹೆ ನೀಡಿದರು.

ಈ ಭೂಸ್ವಾದೀನ ಮತ್ತು ಭೂಮಿಯ ಪೋಡಿ ಕಾರ್ಯವನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಆಗಸ್ಟ್ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸಿ, ವರದಿ ನೀಡುವಂತೆ ಸೂಚಿಸಿದ ಅವರು, ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆಯೂ ಅವರು ಸೂಚಿಸಿದರು.
ಭೂಸ್ವಾಧೀನದ ಜಂಟಿ ಖಾತೆದಾರರನ್ನು ಗುರುತಿಸಲು ಇದುವರೆಗೂ ಸರ್ವೇಯರ್ ಗಳನ್ನು ನೇಮಿಸದಿರುವ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿ ಸಾಗರ, ಹೊಸನಗರ ಮತ್ತು ಶಿವಮೊಗ್ಗ ತಾಲ್ಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರುಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಒಂದು ವಾರದೊಳಗೆ ಜಂಟಿ ಖಾತೆದಾರರನ್ನು ಗುರುತಿಸುವ ಹಾಗೂ ಬಿಟ್ಟು ಹೋದ ಜಮೀನಿನ ಅಳತೆ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಿದರು. ಮುಂದುವರೆದು ಶಿವಮೊಗ್ಗ, ಸಾಗರ ಮತ್ತು ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಜುಲೈ-2025 ರ ಅಂತ್ಯದೊಳಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಶೇಕಡ 100 ರಷ್ಟು ಪ್ರಗತಿಯನ್ನು ಸಾಧಿಸಿ ಪೂರ್ಣಗೊಳಿಸಲು ಸೂಚಿಸಿದರು.
ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಅರಣ್ಯ ಬಿಡುಗಡೆ ಪ್ರಕ್ರಿಯೆ ಸಂಬಂಧ ಪ್ರಗತಿಯಲ್ಲಿರುವ ಎಲ್ಲಾ ಪ್ರಕರಣಗಳಿಗೆ ಜುಲೈ-2025ರ ಅಂತ್ಯದೊಳಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಲು ತುರ್ತು ಕ್ರಮವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಭೂಸ್ವಾದೀನ ಮಾಡಿಕೊಳ್ಳುವ ಕಾರ್ಯದ ಭಾಗವಾಗಿ ರಾಷ್ಟ್ರೀಯ ಹೆದ್ದಾರಿಯ ಭೂಸ್ವಾದೀನಾಧಿಕಾರಿಗಳು ಹಾಗೂ ಶಿವಮೊಗ್ಗದ ಉಪವಿಭಾಗಾಧಿಕಾರಿಗಳು ರೈತರನ್ನು ಭೇಟಿ ಮಾಡಿ ಚರ್ಚಿಸಿ, ಹೆಚ್ಚಿನ ಪರಿಹಾರದ ಮೊತ್ತ ಕೊಡಿಸುವಲ್ಲಿ ಶ್ರಮಿಸುವಂತೆ ಸೂಚಿಸಿದ ಅವರು ಅಧಿಕಾರಿಗಳು ರೈತರೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆಯೂ ಅವರು ಸೂಚಿಸಿದರು.
ಭೂಸ್ವಾದೀನ ಕಾರ್ಯಕ್ಕೆ ಅಗತ್ಯವಿರುವ ಸರ್ವೇಯರ್ಗಳನ್ನು ನಾಳೆಯಿಂದಲೇ ನಿಯೋಜಿಸಿ, ಮುಂದಿನ ಒಂದು ವಾರದ ಅವಧಿಯೊಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಕಾಮಗಾರಿಗೆ ಸಹಕರಿಸಿದ ಹಾಗೂ ಭೂಮಿ ಹಸ್ತಾಂತರಿಸಿದ ರೈತರಿಗೆ ಕೂಡಲೇ ಪರಿಹಾರದ ಮೊತ್ತವನ್ನು ಪಾವತಿಸುವಂತೆಯೂ ಸೂಚಿಸಿದರು.
ಈ ಸಭೆಯಲ್ಲಿ ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ-69 ಶಿವಮೊಗ್ಗದಿಂದ ಆನಂದಪುರಂವರಗೆ ಚತುಷ್ಫಥ ರಸ್ತೆ ನಿರ್ಮಾಣ. ಹೊಸೂರು ಮತ್ತು ತಾಳಗುಪ್ಪ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ. ಸಾಗರ ಪಟ್ಟಣದಲ್ಲಿ ಚತುಷ್ಫಥ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-766ಸಿ ಬೈಂದೂರಿನಿಂದ ನಾಗೋಡಿಯವರಗೆ ದ್ವಿಪಥ ರಸ್ತೆ ನಿರ್ಮಾಣ, ಹೊಸನಗರ ಹಾಗೂ ಬೆಕ್ಕೋಡಿ ಬಳಿ 2 ಭಾರಿ ಸೇತುವೆ ಹಾಗೂ ದ್ವಿಪಥ ರಸ್ತೆ ನಿರ್ಮಾಣ ಮತ್ತು ಶಿಕಾರಿಪುರ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-169ರ ನೆಲ್ಲಿಸರ ಕ್ಯಾಂಪ್ ನಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಚತುಷ್ಫಥ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-169ಎ ಮೇಗರವಳ್ಳಿಯಿಂದ ಆಗುಂಬೆಯವರೆಗೆ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರಗತಿ ಮಾಹಿತಿ ಪಡೆಯಲಾಯಿತು.
ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಗರ ಮತ್ತು ಶಿವಮೊಗ್ಗ ಉಪವಿಭಾಗಾಧಿಕಾರಿಗಳು, ಭೂದಾಖಲೆಗಳ ಸಹಾಯಕ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.