ಶಿವಮೊಗ್ಗ : ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ಜಲಾಶಯದಿಂದಲೇ ನೀರನ್ನು ಸರಬರಾಜು ಮಾಡಬೇಕೇ ಹೊರತು, ಭದ್ರಾ ಬಲದಂಡೆಯ ಕಾಲುವೆಯನ್ನು ಸೀಳಿ ಕಾಲುವೆಯ ಮೂಲಕ ನೀರನ್ನು ಹರಿಸಬಾರದು ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ಸುಮಾರು 1166 ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಭದ್ರಾ ಜಲಾಶಯದಿಂದ ನೀರು ಸರಬರಾಜು ಮಾಡಲು ಜಾಕ್ವೆಲ್ಗೆ ನೀರು ಸಂಗ್ರಹಿಸಬೇಕಾಗಿದೆ. ಆದರೆ ಭದ್ರಾ ಜಲಾಶಯದಿಂದ ಜಾಕ್ವೆಲ್ಗೆ ನೀರು ಹರಿಸುವುದನ್ನು ಬಿಟ್ಟು ಭದ್ರಾ ಬಲದಂಡೆಯ ಕಾಲುವೆಯನ್ನು ಸೀಳಿ ಜಾಕ್ವೆಲ್ಗೆ ನೀರು ಹರಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಹೀಗೆ ಕಾಲುವೆಯನ್ನು ಸೀಳುವುದರಿಂದ ಕಾಲುವೆಯಲ್ಲಿನ ನೀರಿನ ರಭಸ ಇಲ್ಲವಾಗಿ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ಹಾಯುವುದು ಸಾಧ್ಯವೇ ಇಲ್ಲವಾಗಿದೆ ಎಂದರು.

ಭದ್ರಾ ಕಾಲುವೆ ಪ್ರಮುಖವಾಗಿ ಅಚ್ಚುಕಟ್ಟುದಾರರ ಬೆಳೆಗಳಿಗೆ ನೀರುಣಿಸಲು ಇರುತ್ತದೆ. ಈಗಲೇ ಕೊನೆಯ ಭಾಗದ ರೈತರಿಗೆ ನೀರು ತಲುಪುವುದು ಕಷ್ಟವಾಗುತ್ತಿರುವಾಗ ಇದರ ಮಧ್ಯೆ ಭದ್ರಾ ಕಾಲುವೆಯನ್ನು ಸೀಳಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ತೆಗೆದುಕೊಂಡು ಹೋದರೆ ರೈತರಿಗೆ ನೀರು ಇಲ್ಲದಂತಾಗುತ್ತದೆ. ಈ ಅವೈಜ್ಞಾನಿಕ ಯೋಜನೆ ಮತ್ತು ತೀರ್ಮಾನದಿಂದ ರೈತರು ತುಂಬಾ ಆತಂಕದಲ್ಲಿದ್ದಾರೆ. ಒಮ್ಮೆ ನಾಲೆಗೆ ಬಿಟ್ಟ ನೀರನ್ನು ನಡುವೆಯೇ ಈ ರೀತಿ ಬೇರೆ ಕಡೆ ವರ್ಗಾಯಿಸಿದರೆ ನೀರು ಮುಂದಕ್ಕೆ ಹೋಗುವುದಾದರೂ ಹೇಗೆ ಎಂದರು.

ಕುಡಿಯವ ನೀರಿನ ಯೋಜನೆಗೆ ನೀರು ಹರಿಸುವುದು ತಪ್ಪಲ್ಲ. ನೀರನ್ನು ಬಿಡುವುದು ನಮ್ಮ ಧರ್ಮ. ಆದರೆ ಈ ನೀರನ್ನು ಹೇಗೆ ಬಿಡಬೇಕು ಎಂಬ ತೀರ್ಮಾನ ಬಹಳ ಮುಖ್ಯ. ನಾಲೆಯಿಂದ ನೀರು ಬಿಡುವ ಬದಲು ನೇರವಾಗಿ ಅಣೆಕಟ್ಟಿನಿಂದ ನೀರು ಹರಿಸಬೇಕು. ಆಗ ಯಾವ ತೊಂದರೆಯೂ ಇರುವುದಿಲ್ಲ. ಆದ್ದರಿಂದ ಕೂಡಲೇ ಕಾಲುವೆಯಿಂದ ನೀರು ಹರಿಸುವುದನ್ನು ಬಿಟ್ಟು ಅಣೆಕಟ್ಟಿನಿಂದ ನೇರವಾಗಿ ಜಾಕ್ವೆಲ್ ನೀರು ಹರಿಸಲಿ. ಅದರಲ್ಲೂ ಅಣೆಕಟ್ಟಿನಿಂದ ಸ್ವಲ್ಪ ದೂರದ ಕಾಲುವೆಯಿಂದಲೇ ನಾಲೆಯನ್ನು ಸೀಳಲಾಗಿದೆ ಎಂದು ಆರೋಪಿಸಿದರು.

ಇದು ಕೇವಲ ಗುತ್ತಿಗೆದಾರನ ಹಣ ಉಳಿಸಲು ಮಾಡಿರುವ ಅತ್ಯಂತ ಕೆಟ್ಟ ಯೋಚನೆ ಮತ್ತು ಯೋಜನೆಯಾಗಿದೆ. ಭದ್ರಾ ಬಲದಂಡೆ ಕಾಲುವೆಯಲ್ಲಿ ರೈತರ ಜೀವ-ಜೀವನವೇ ಇದೆ. ಆದ್ದರಿಂದ ಅಧಿಕಾರಿಗಳು ಮತ್ತು ಸರ್ಕಾರ ಕೂಡಲೇ ಈ ಅವೈಜ್ಞಾನಿಕ ಯೋಜನೆಯನ್ನು ನಿಲ್ಲಿಸಬೇಕಾಗಿದೆ. ನೀರಾವರಿ ಮಂತ್ರಿಯೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರವರು ತಕ್ಷಣವೇ ಇದರ ಬಾದಕಗಳನ್ನು ಗಮನಿಸಿ, ಕೂಡಲೇ ಕಾಲುವೆಯಿಂದ ನೀರು ಹರಿಸುವುದನ್ನು ಬಿಟ್ಟು ನೇರವಾಗಿ ಅಣೆಕಟ್ಟಿನಿಂದ ನೀರು ಹರಿಸಬೇಕು. ಇಲ್ಲದಿದ್ದರೆ ಅಚ್ಚುಕಟ್ಟು ರೈತರು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಪುಟ್ಟಪ್ಪ ಕೆ.ಎಸ್., ಸೀನಪ್ಪ ಹಾರೋಬೆನವಳ್ಳಿ, ಮಂಜುನಾಥೇಶ್ವರ, ಬಸವರಾಜ್ ಎಮ್ಮೆಹಟ್ಟಿ, ಕೃಷ್ಣಮೂರ್ತಿ ಅಗಸವಳ್ಳಿ, ಮಂಜುನಾಥ್ ಇದ್ದರು.
ಶಿವಮೊಗ್ಗ : ಇತ್ತೀಚೆಗೆ ನಿಧನರಾದ ಖ್ಯಾತಕವಿ ಹೆಚ್.ಎಸ್. ವೆಂಕಟೇಶ್ಮೂರ್ತಿಯವರ ನಮನ ಕಾರ್ಯಕ್ರಮವನ್ನು ಜೂನ್ 14ರಂದು ಸಂಜೆ 6 ಗಂಟೆಗೆ ಮಲ್ಲಿಕಾರ್ಜುನ ಚಿತ್ರಮಂದಿರದ ಪಕ್ಕದ ರಸ್ತೆಯಲ್ಲಿರುವ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.
ಹೆಚ್ಎಸ್ವಿ ನಮನ ಕಾರ್ಯಕ್ರಮದಲ್ಲಿ ಕವನ-ವ್ಯಾಖ್ಯಾನ, ಗಾಯನ ನಡೆಯಲಿದೆ. ವಿನಯ್ ಶಿವಮೊಗ್ಗ, ಪೃಥ್ವಿಗೌಡ, ಪಾರ್ಥ ಚಿರಂತನ್, ಸಂಗೀತ, ಸೋನಾಲಿ ಟೀಂ ಕಲಾತ್ಮದಿಂದ ಕಾರ್ಯಕ್ರಮಗಳು ನಡೆಯಲಿವೆ.
ಆಸಕ್ತರು, ಓದುಗ ಬಂಧುಗಳು ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಪ್ರಜ್ಞಾ ಬುಕ್ ಹೌಸಿನ ಸೌಮ್ಯ ಕೃಷ್ಣಮೂರ್ತಿ ಕೋರಿದ್ದಾರೆ.