ಶಿವಮೊಗ್ಗ : ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಮನುಷ್ಯನ ಒತ್ತಡಗಳನ್ನು ಕಡಿಮೆ ಮಾಡುತ್ತವೆ ಎಂದು ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಪ್ರಧಾನ ಶಸ್ತ್ರಚಿಕಿತ್ಸಕ ಡಾ. ಸಿದ್ದನಗೌಡ ಪಟೇಲ್ ಹೇಳಿದರು.
ಅವರು ಇಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಕ್ರೀಡಾ ವಿಭಾಗದ ವಾರ್ಷಿಕ ಚಟುವಟಿಕೆ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಾಂಸ್ಕøತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುತ್ತವೆ. ಅದರಲ್ಲೂ, ಕ್ರೀಡೆಗಳು ಆರೋಗ್ಯದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗುತ್ತವೆ. ಆದರೆ ಇತ್ತೀಚೆಗೆ ಕ್ರೀಡೆ ಎಂದರೆ ಕೇವಲ ಕ್ರಿಕೇಟ್ ಎಂದಾಗಿದೆ. ಕಬ್ಬಡ್ಡಿ, ಖೋ ಖೋ, ಕುಸ್ತಿ ಮುಂತಾದ ದೇಸಿ ಕ್ರೀಡೆಗಳು ಕೂಡ ವಿಜೃಂಭಿಸಬೇಕಾಗಿದೆ. ವಿಶ್ವವಿದ್ಯಾಲಯಗಳು ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.

ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತವೆ. ಸಾಮರಸ್ಯಗಳನ್ನು ಬೆಳೆಸುವುದರ ಜೊತೆಗೆ ಮಾನವೀಯ ಸಂಬಂಧಗಳನ್ನು ರೂಪಿಸುತ್ತವೆ. ನಾವು ಎಷ್ಟೇ ವಿದ್ಯೆ ಕಲಿತರೂ ಕೂಡ ಸೇವೆಗೆ ಮುಡಿಪಾಗಿಡಬೇಕು. ಹಣವೊಂದೇ ಮುಖ್ಯವಲ್ಲ. ವೈದ್ಯರ ಕೆಲಸವೂ ಅದೇ ಆಗಿದೆ. ನಾನು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಇದನ್ನೇ ಯೋಚಿಸುತ್ತೇನೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಹ್ಯಾದ್ರಿ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಪ್ರೊ.ಹಾ.ಮ. ನಾಗಾರ್ಜುನ, ಸಹ್ಯಾದ್ರಿ ವಿಜ್ಞಾನ ಕಾಲೇಜೆಂದರೆ ಸಾಂಸ್ಕøತಿಕ ರಾಯಭಾರಿ ಎಂದೇ ಹೆಸರಾಗಿದೆ. ಸುಮಾರು 90 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಈ ಕಾಲೇಜಿಗೆ ಒಂದು ಅತ್ಯುತ್ತಮ ಘನತೆಯಿದೆ. ರಾಷ್ಟ್ರಕವಿ ಕುವೆಂಪುರವರು ಈ ಕಾಲೇಜಿಗೆ ಸಹ್ಯಾದ್ರಿ ಎಂದು ಹೆಸರಿಟ್ಟಿದ್ದರು. ಈ ಕಾಲೇಜಿನಲ್ಲಿ ಓದಿದವರು ಗಣ್ಯರಾಗಿದ್ದಾರೆ. ಹೆಸರಾಂತ ಸಾಹಿತಿಗಳಾಗಿದ್ದಾರೆ. ವಿಜ್ಞಾನಿಗಳಾಗಿದ್ದಾರೆ. ಇಂತಹ ಕಾಲೇಜಿನಲ್ಲಿ ಓದುತ್ತಿರುವ ನಾವೆಲ್ಲರೂ ಧನ್ಯರು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಪ್ರಶಸ್ತಿ ಪುರಸ್ಕøತ ಕಿರುತೆರೆ ನಿರ್ದೇಶಕ ಗಾರ್ಗಿ ಕಾರೆಹಕ್ಲು ಮಾತನಾಡಿ, ಮಾತೃಭಾಷೆಗೆ ಆದ್ಯತೆಕೊಡಿ. ನಮ್ಮ ರಾಜ್ಯದಲ್ಲಿ ಕನ್ನಡ ಕಡ್ಡಾಯವಾಗಿರಬೇಕು. ವಿದ್ಯಾರ್ಥಿಗಳು ಏನೇ ಮಾಡಿದರೂ ಬದ್ಧತೆಯಿಂದ ಮಾಡಿ, ಪಠ್ಯೇತರ ಚಟುವಟಿಕೆಗೆ ಹೆಚ್ಚು ಆದ್ಯತೆ ಕೊಡಿ, ಸಾಮಾಜಿಕ ಜಾಲ ತಾಣದಲ್ಲಿ ಇಂದು ಬಹುಮುಖ್ಯವಾಗಿ ವಿಜೃಂಭಿಸುತ್ತಿರುವುದು ಯಶಸ್ಸಿನ ಮಂತ್ರವಾಗಿದೆ. ಈ ಯಶಸ್ಸು, ಅಧಿಕಾರ ಹಣ, ಅಂತಸ್ತು ಇವುಗಳಿಂದ ಬರುವುದಿಲ್ಲ. ಮನುಕುಲದ ಸೇವೆ ಮಾಡುವುದೇ ಯಶಸ್ಸು. ಹೀಗೆ ಮಾಡಿದವರು ನಮ್ಮ ನೆನಪಿನಲ್ಲಿ ಉಳಿಯುತ್ತಾರೆ. ನಮ್ಮ ಮುತ್ತಜ್ಜನ ಹೆಸರು ನಮಗೆ ನೆನಪಿರುವುದಿಲ್ಲ. ಆದರೆ ಬುದ್ಧ, ಗಾಂಧಿ, ಬಸವಣ್ಣ ಮುಂತಾದವರ ಹೆಸರುಗಳು ನಮ್ಮ ಮನದಲ್ಲಿರುತ್ತವೆ ಎಂದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯೆ ಪ್ರೊ.ರಾಜೇಶ್ವರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ.ನಾಗರಾಜ್ ಎನ್. ಯೋಗಪಟು ಹೆಚ್.ಎಲ್. ಶೇಖರಪ್ಪ, ಕ್ರೀಡಾವಿಭಾಗದ ಸಂಚಾಲಕ ಡಾ. ಯುವರಾಜ್ ಪಿಸಿಎಂ, ಪ್ರೊ. ಕೃಷ್ಣಸ್ವಾಮಿ ಕೆ., ಡಾ. ಟಿ.ಡಿ. ಗೋಪಾಲ್ ಸೇರಿದಂತೆ ಹಲವರಿದ್ದರು.