ಶಿವಮೊಗ್ಗ : ಮೇ೨೯ರಂದು ಬೆಂಗಳೂರಿನಲ್ಲಿ ಭಾರೀ ದೊಡ್ಡಮಟ್ಟದಲ್ಲಿ ೨ ವರ್ಷ ಶಿಕ್ಷಣದಲ್ಲಿ ಹರ್ಷ ಎಂಬ ಕಾರ್ಯಕ್ರಮ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭೂತಪೂರ್ವ ಸಾಧನೆ ಮಾಡಲಾಗಿದೆ. ಮಕ್ಕಳಿಗೆ ಮೂರು ಭಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದೇವೆ. ಉತ್ತಮ ಫಲಿತಾಂಶ ಬಂದಿದೆ. ವಾರದಲ್ಲಿ ಆರು ದಿನ ಮೊಟ್ಟೆ, ನೀಡಲು ಕ್ರಮ ತೆಗೆದುಕೊಂಡಿದ್ದೇವೆ. ನಾವು ಭರವಸೆ ನೀಡಿದಂತೆ ಈ ಶೈಕ್ಷಣಿಕ ವರ್ಷ ಪ್ರಾರಂಭದಿಂದಲೇ ೫೧ ಸಾವಿರ ಶಿಕ್ಷಕರನ್ನು ನೇಮಕ ಮಾಡುತ್ತಿದ್ದೇವೆ. ಮಾತಿನಂತೆ ಅವರಿಗೆ ೨೦೦೦ ರೂ. ಹೆಚ್ಚುವರಿವಾಗಿ ನೀಡುತ್ತಿದ್ದೇವೆ. ಮೇ೩೧ರಂದು ಅಧಿಕೃತವಾಗಿ ಶಾಲೆಗಳು ಆರಂಭವಾಗುತ್ತಿದೆ ಎಂದರು.

ಪ್ರಿಯಾಂಕ ಖರ್ಗೆ ವಿರುದ್ಧ ಕಲ್ಬುರ್ಗಿ ಚಲೋ ಬಿಜೆಪಿ ಕಾರ್ಯಕ್ರಮಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ಕಾಲದಲ್ಲಿ ಗೂಂಡಾಯಿಸಂ ಎಷ್ಟಿತ್ತು ? ಎಲ್ಲೆಲ್ಲಿ, ಯಾವ್ಯಾವ ನಾಯಕರು ಎಷ್ಟು ಗೂಂಡಾಗಿರಿ ಮಾಡದ್ದಾರೆ. ಅವರ ಕಾಲದಲ್ಲಿ ಏನಾಗಿತ್ತು. ಲಿಸ್ಟ್ ಕೊಡಲಾ… ಎಂದರು.
ರಾಮನಗರ ಹೆಸರಿನಲ್ಲಿ ರಾಮ ಎಂದು ಇರುವುದರಿಂದ ಹೆಸರು ಬದಲಾವಣೆ ಮಾಡಿದ್ದಾರೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಅದೇನು ಕಾನೂನು ಬಾಹಿರಾನಾ ಎಲ್ಲದರಲ್ಲೂ ತಪ್ಪು ಹುಡುಕುವುದೇ ಅವರ ಕೆಲಸ ಎಂದರು.
ನೀವು ಯುದ್ಧದ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಟ್ರಂಪ್ ಮಾತು ಕೇಳಿ ಸುಮ್ಮನಾಗಿದ್ದೀರಲ್ಲಾ, ಅವರೇನು ನಮ್ಮ ದೇಶದ ಪ್ರಧಾನಿಯಾ ಎಂದು ನೀವೇ ಕೇಳುವುದಿಲ್ಲ. ೧೩೦ ಕೋಟಿ ಜನರಿಗೆ ಟ್ರಂಪ್ ಬುದ್ಧಿ ಹೇಳಬೇಕಾ ? ಪಾಕಿಸ್ತಾನ ಮತ್ತು ಇಂಡಿಯಾ ಇಬ್ಬರಿಗೂ ಕಾಮನ್ಸೆನ್ಸ್ ಇದೆ ಎಂದು ಟ್ರಂಪ್ ಹೇಳುತ್ತಾರೆ. ಆದರೆ ಟೆರರಿಸಂ ನಿಲ್ಲಿಸಬೇಕಾದರೆ ಆ ಟೈಮ್ನಲ್ಲಿ ಏನು ಮಾಡಬೇಕೋ ಅದನ್ನು ಮಾಡಬೇಕಿತ್ತು.

ಇಂದಿರಾ ಗಾಂಧಿಯವರು ಪಾಕಸ್ತಾನವನ್ನು ಪುಡಿಮಾಡಿರಲಿಲ್ಲವೇ ? ಈಗ ಎಲ್ಲಾ ನಿಂತುಹೋಯಿತು. ೨೬ ಕುಟುಂಬಗಳಿಗೆ ನ್ಯಾಯ ಸಿಕ್ಕಿದಿಯಾ ? ೪ ವಿಮಾನ ಹಾರಾಡಿದ ಕೂಡಲೇ ಮುಗಿದು ಹೋಯಿತೇ ? ಟೀಕೆ-ಟಿಪ್ಪಣಿ ಮಾಡುತ್ತಿರುತ್ತಾರೆ. ಆಗ ಪಹಲ್ಗಾಮ್ ದಾಳಿಯಾದಾಗಲೂ ಆಟ ನಡೆಯಿತು. ನೀವು ಮಾಧ್ಯಮದವರು ನಮ್ಮ ೨ ವರ್ಷದ ಸಾಧನೆ ಹಾಗೂ ಯೋಜನೆಗಳ ಬಗ್ಗೆ ಕೇಳುವುದಿಲ್ಲ. ಯುವನಿಧಿ, ಅನ್ನಭಾಗ್ಯ, ಭಾಗ್ಯಲಕ್ಷ್ಮೀ, ಶಕ್ತಿ ಯೋಜನೆ ಬಗ್ಗೆ ಕೇಳಿ, ಯಾರಿಗೆ ಸಿಕ್ಕಿಲ್ಲ ಅವರಿಗೆ ಕೊಡಿಸುವ ಕೆಲಸ ಮಾಡೋಣ. ನಮ್ಮ ಯೋಜನೆ ಹಾಳು ಮಾಡಬೇಕೆಂದು ಆಗ ಬಿಜೆಪಿ ಕೇಂದ್ರ ಸರ್ಕಾರ ಅಕ್ಕಿ ನೀಡಿಲ್ಲ. ಈಗ ಗೋಡೌನ್ನಲ್ಲಿ ಹುಳಬಿದ್ದ ಬಳಿಕ ಅಕ್ಕಿ ನೀಡಲು ಮುಂದಾಗಿದ್ದಾರೆ. ಹಣ ನಮ್ಮದು, ಈಗ ೨೨.೫೦ ಪೈಸೆ ಕೊಟ್ಟು ನಾವು ಖರೀದಿ ಮಾಡುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣ ಉಚಿತ ನೀಡಿದ್ದೇವೆ. ಮಕ್ಕಳು ಫಲಿತಾಂಶ ಚೆನ್ನಾಗಿ ಬಂದಿದೆ ಎಂದರು.

ಭೈರತಿ ಸುರೇಶ್ ತಾಯಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಅವರು, ಹೆತ್ತವರನ್ನು ಕಳೆದುಕೊಂಡ ನೋವು ಭರಸುವುದು ಕಷ್ಟ. ಆ ಕುಟುಂಬಕ್ಕೆ ನಷ್ಟ ಭರಿಸುವ ಶಕ್ತಿ ಕೊಡಲಿ ಎಂದರು.
೬.೨ ಕೋಟಿ ನೀಡಿ, ಮೈಸೂರು ಸ್ಯಾಂಡಲ್ ಸೋಪಿಗೆ ತಮನ್ನಾ ಅವರನ್ನು ರಾಯಭಾರಿಯನ್ನಾಗಿಸಿದ್ದಕ್ಕೆ ವ್ಯಾಪಕ ಆಕ್ರೋಶ ಉಂಟಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ನಮ್ಮ ಶಿವರಾಜ್ ಕುಮಾರ್ ಕೂಡಾ ತಮಿಳು ಚಿತ್ರದಲ್ಲಿ ನಟಿಸಿದ್ದಾರೆ. ತಮನ್ನಾ ಅವರ ಚಿತ್ರವನ್ನು ನೋಡುವುದು ಬಿಡ್ತೀರಾ ? ಮಾರುಕಟ್ಟೆಯ ವಾತಾವರಣ ನೋಡಿ ಜಾಹೀರಾತಿಗೆ ಮೀಸಲಾದ ಸಮಿತಿಯವರು ತಮ್ಮ ಪ್ರಾಡೆಕ್ಟ್ಗಳ ಮಾರುಕಟ್ಟೆ ವಿಸ್ತರಿಸಲು ಅವರಿಗಿರುವ ಹಕ್ಕಿನಂತೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವು ಉತ್ತರಿಸಲಾಗುವುದಿಲ್ಲ ಎಂದರು.
ಮಲೆನಾಡಲ್ಲಿ ಆನೆ ಮತ್ತು ಮಂಗನ ಕಾಟಕ್ಕೆ ಸಂಬಂಧಿಸಿ, ಉತ್ತರಿಸಿದ ಅವರು, ಅವು ಪ್ರಾಣಿಗಳು, ನಾವು ಕೂಡಾ ಒಂದು ರೀತಿಯ ಪ್ರಾಣಿಗಳೇ ಆಗಿದ್ದು, ಅವರ ಜಾಗವನ್ನು ನಾವು ಆಕ್ರಮಿಸಿದ್ದೇವೆ ಹೊಟ್ಟೆ ಹಸಿವಾದಾಗ, ಅನಿವಾರ್ಯವಾಗಿ ಅವು ನುಗ್ಗಿ ಹಾಳು ಮಾಡುತ್ತವೆ. ಆದರೂ ಮಂಗಗಳಿಗೆ ಮಂಕಿಪಾರ್ಕ್, ಆನೆಗಳಿಗೆ ಕಾರಿಡಾರ್ ನಿರ್ಮಾಣ ಮಾಡುವ ಯೋಜನೆ ಇದೆ. ಈ ಬಗ್ಗೆ ವಿಧಾನಸೌಧದಲ್ಲೂ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ನಾನು ಮತ್ತೊಮ್ಮೆ ಗಮನಸೆಳೆಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿ.ಡಿ. ಮಂಜುನಾಥ್, ವಿಜಯಕುಮಾರ್, ಬಲ್ಕೀಶ್ಭಾನು, ಆರ್. ಪ್ರಸನ್ನಕುಮಾರ್ ಸೇರಿದಂತೆ ಮೊದಲಾದವರಿದ್ದರು.