ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷೆಯ ಎಡವಟ್ಟು ಮತ್ತೆ ಮುಂದುವರಿದಿದೆ.
ಇಂದು ವಿವಿ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪದವಿ ಕಾಲೇಜುಗಳಲ್ಲಿ ಬಿ.ಎ.ಪದವಿಯ ಆರನೇ ಸೆಮಿಸ್ಟರ್ ನ ಸಿಬಿಸಿಎಸ್/ಎನ್ಇಪಿ ಸ್ಕೀಂನ ಐಚ್ಛಿಕ ಕನ್ನಡ ಪತ್ರಿಕೆ ಕ್ಯೂಪಿ ಕೋಡ್ ೩೦೬೩೨ ಸಾಂಸ್ಕೃತಿಕ ಅಧ್ಯಯನಗಳು-ಪಠ್ಯಗಳ ಬಹುಶಾಸ್ತ್ರೀಯ ಅಧ್ಯಯನ (ಘಟಕ-೧೪) ರ ವಿಷಯದ ಪರೀಕ್ಷೆ ನಡೆಯಬೇಕಾಗಿತ್ತು. ಆದರೆ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಕೈಗೆ ಕನ್ನಡ ಪ್ರಶ್ನೆ ಪತ್ರಿಕೆ ಬಂದಾಗ ಶಾಕ್ ಕಾದಿತ್ತು.

ಘಟಕ ೧೪ರ ಪ್ರಶ್ನೆ ಪತ್ರಿಕೆ ಬದಲ್ಲಿಗೆ ಬೇರೆ ಯಾವುದೋ ಘಟಕದ ಪ್ರಶ್ನೆ ಪತ್ರಿಕೆ ಅದಾಗಿತ್ತು. ಪರೀಕ್ಷೆ ಬರೆಯಲು ಸರ್ವ ಸಿದ್ಧತೆ ಮಾಡಿಕೊಂಡು ಬಂದ ವಿದ್ಯಾರ್ಥಿಗಳ ಜಂಗಾಬಲವೇ ಉಡುಗಿಹೋದಂತಾಯಿತು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳನ್ನು ಓದಲಾರಂಭಿಸಿದಾಗ ಕಂಡುಬಂದಿದ್ದು ಔಟ್ ಆಫ್ ಸಿಲೆಬಸ್ನ ಪ್ರಶ್ನೆಗಳು! ನಂತರ ಕಾಲೇಜುಗಳ ಪ್ರಾಂಶುಪಾರು ಇದರ ಕುರಿತು ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದಾಗ ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪಿನ ಅರಿವಾಗಿದೆ. ತಕ್ಷಣ ತಾಂತ್ರಿಕ ತೊಂದರೆಗಳಿಂದ ಇಂದಿನ ಈ ಕನ್ನಡ ಐಚ್ಛಿಕ ವಿಷಯದ ಪರೀಕ್ಷೆಯನ್ನು ಮುಂದೂಡಲಾಗಿದೆ. ದಿನಾಂಕವನ್ನು ನಂತರ ತಿಳಿಸಲಾಗುವುದು. ವಿದ್ಯಾರ್ಥಿಗಳಿಗೆ ನೀಡಿದ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ವಾಪಾಸ್ಸು ಪಡೆಯುವ ಸಂದೇಶ ವಿ.ವಿ.ಯಿಂದ ಎಲ್ಲಾ ಪ್ರಾಂಶುಪಾಲರಿಗೆ ಬಂದಿದೆ ಎನ್ನಲಾಗಿದೆ.

ಗರಿಷ್ಟ ೬೦ ಅಂಕಗಳ ೨ಗಂಟೆಯ ಅವಧಿಯ ಪರೀಕ್ಷೆ ಇದಾಗಿತ್ತು. ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿನ ಯಡವಟ್ಟಿನಿಂದ ನೊಂದು ವಿವಿಗೆ ಹಿಡಿಶಾಪ ಹಾಕುತ್ತಾ, ವಾಪಸ್ ಹೋದ ಘಟನೆಯೂ ನಡೆಯಿತು.

ಇಂದಿನ ಬಿಎ ಆರನೇ ಸೆಮಿಸ್ಟರ್ ಕನ್ನಡ ಐಚ್ಛಿಕ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಆದ ಯಡವಟ್ಟಿನ ಬಗ್ಗೆ ವಿವಿ ಗಮನಕ್ಕೆ ಬಂದಿದೆ. ಇದು ಆ ವಿಷಯದ ಪರೀಕ್ಷಾ ಮಂಡಳಿಯ ಅಧ್ಯಕಗಷರ ಬೇಜವಾಬ್ದಾರಿಯಿಂದ ಆಗಿದೆ. ಇದರ ಕುರಿತು ತನಿಖೆ ನಡೆಸಲಾಗು
ವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಪ್ರೊ.ಗೋಪಿನಾಥ್, ಪರೀಕ್ಷಾಂಗ ಕುಲಸಚಿವರು, ಕುವೆಂಪು ವಿಶ್ವವಿದ್ಯಾಲಯ.
ತಾಂತ್ರಿಕ ತೊಂದರೆಯಿಂದ ಇಂದಿನ ಕನ್ನಡ ಕ್ಯೂಪಿ ಕೋಡ್ ೩೦೬೩೨ರ ಪರೀಕ್ಷೆಯನ್ನು ಮುಂದೂಡಲಾಗಿದೆ. ಬದಲಾದ ದಿನಾಂಕವನ್ನು ನಂತರ ತಿಳಿಸಲಾಗುವುದು.
-ಡಾ.ಸತ್ಯಪ್ರಕಾಶ್ ಎಂ.ಆರ್., ನೋಡಲ್ ಅಧಿಕಾರಿ, ಯುಯುಸಿಎಂಎಸ್, ಕುವೆಂಪು ವಿ.ವಿ.