ಶಿವಮೊಗ್ಗ : ನೀಟ್ ಚಳುವಳಿ ನೆಪದಲ್ಲಿ ಕಾಂಗ್ರೆಸ್ ದೇಶವನ್ನು ಛಿದ್ರಮಾಡುವ ಹುನ್ನಾರ ನಡೆಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನೀಟ್ ಪರೀಕ್ಷೆ ಬಗ್ಗೆ ಪ್ರಧಾನಿ ನರೇಂದ್ರಮೋದಿಯವರು ಎಲ್ಲಾ ತರಹದ ಕ್ರಮಗಳನ್ನು ಕೈಗೊಂಡಿದ್ದಾರೆ. ಪೇಪರ್ ಲಿಕೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸರ್ಕಾರ ತಪ್ಪಿತಸ್ಥರಿಗೆ ೧೦ ಕೋಟಿ ರೂಪಾಯಿ ದಂಡ ಅಲ್ಲದೆ ೧೦ವರ್ಷ ಜೈಲುವಾಸ ಶಿಕ್ಷೆಯನ್ನು ಪ್ರಕಟಿಸಿದೆ. ಈ ೧೦ವರ್ಷವನ್ನು ಇನ್ನೂ ಸುಧೀರ್ಘ ಅವಧಿಗೆ ತರಲು ಚಿಂತನೆ ನಡೆಯುತ್ತಿದೆ. ತಪ್ಪಿತಸ್ಥ ಉನ್ನತ ಅಧಿಕಾರಿಗಳಿಗೆ ಗೇಟ್ಪಾಸ್ ನೀಡಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾದ ತಕ್ಷಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಟ್ ಮರು ಪರೀಕ್ಷೆ ಮಾಡಲಾಗಿದೆ. ಫಲಿತಾಂಶವೂ ಬಂದಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದೂ ಆಗಿದೆ. ಹೀಗಿರುವಾಗ ಕಾಂಗ್ರೆಸ್ ವಿದ್ಯಾರ್ಥಿಗಳ ಪ್ರತಿಭಟನೆಗೆ ಕುಮ್ಮಕ್ಕು ಕೊಡುವುದಾದರೂ ಏಕೆ ? ಎಂದ ಅವರು, ಈ ನಿಟ್ಟಿನಲ್ಲಿ ತಪ್ಪಿತಸ್ತರಿಗೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ಸಂಬಂಧ ಬರುವ ಸೋಮವಾರ ಸಂಸತ್ತಿನಲ್ಲಿ ವಿಶೇಷ ಮಸೂದೆಯನ್ನು ಪ್ರಧಾನಿಗಳು ಮಂಡಿಸಲಿದ್ದಾರೆ ಎಂದರು.

ಈ ಹಿಂದೆ ಪ್ರಧಾನಿ ಮೋದಿಯವರ ಮೇಲೆ ಗೋದ್ರಾ ಹತ್ಯಾಕಾಂಡದ ಕುರಿತು ವಿನಾಃಕಾರಣ ಆರೋಪವನ್ನು ಹೋರಿಸಲಾಗಿತ್ತು. ತದನಂತರ ಕೇಂದ್ರ ಸರ್ಕಾರ ಜಿಎಸ್ಟಿ, ನೋಟಿನ ಅಮಾನ್ಯೀಕರಣ, ರಾಫೆಲ್ ವಿಮಾನ ಒಪ್ಪಂದ, ಆರ್ಟಿಕಲ್ ೩೭೦, ಪೌರತ್ವ ತಿದ್ದುಪಡಿ ಕಾಯ್ದೆ, ವಕ್ಫ್, ಎಸ್ಐಆರ್ ಜಾರಿ, ಕೋವಿಡನ್ನು ಸಮರ್ಥವಾಗಿ ಎದುರಿಸಿದ ಸಂದರ್ಭದಲ್ಲಿಯೂ ಕಾಂಗ್ರೆಸ್ ಇವೆಲ್ಲವೂಗಳನ್ನು ವಿರೋಧಿಸಿತ್ತು. ಕೃಷಿಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸಿದಾಗ ಆ ಕಾಯ್ದೆಯನ್ನು ವಾಪಾಸ್ಸು ತೆಗೆದುಕೊಂಡ ಸಂದರ್ಭದಲ್ಲಿಯೂ ಕಾಂಗ್ರೆಸ್ ಸಂಘರ್ಷಕ್ಕೆ ಇಳಿದಿತ್ತು ಎಂದು ಹರಿಹಾಯ್ದರು.

ರಾಹುಲ್ಗಾಂಧಿಯವರ ಅಜ್ಜಿ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ೧೯೭೫ ಇದೇ ಜುಲೈ ತಿಂಗಳು ಸಂವಿಧಾನ ಬಾಹಿರ ಕರಾಳ ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿ, ಸರ್ವಾದಿಕಾರಿ ಪ್ರವೃತ್ತಿಯನ್ನು ಪ್ರದರ್ಶಿಸಿದ್ದನ್ನು, ದೇಶವಾಸಿಗಳ ಸ್ವಾತಂತ್ರ್ಯಹರಣ ಮಾಡಿದ್ದನ್ನು ಯಾರೂ ಮರೆಯುವುದಿಲ್ಲ. ಪ್ರಧಾನಿ ನರೇಂದ್ರಮೋದಿಯವರು ದೇಶದ ಪ್ರಜೆಗಳ ಕಲ್ಯಾಣದ ಬಗ್ಗೆ ಎಷ್ಟೇ ಕೆಲಸ ಮಾಡಿದರೂ ಕಾಂಗ್ರೆಸ್ ಅವರಿಗೆ ನೆಮ್ಮದಿಯಿಂದ ಕೆಲಸ ಮಾಡಲು ಬಿಡುತ್ತಿಲ್ಲ. ಈ ಹಿಂದೆಯೂ ಕಾಂಗ್ರೆಸ್ ಸರ್ಕಾರವಿದ್ಧಾಗ ಅನೇಕ ತಪ್ಪುಗಳಾಗಿವೆ. ಯುವಕರನ್ನು ಸದೃಢಗೊಳಿಸುವ ಯಾವ ಯೋಜನೆಯನ್ನು ಕಾಂಗ್ರೆಸ್ ಹಮ್ಮಿಕೊಳ್ಳಲಿಲ್ಲ. ಅವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ದೇಶದ ಯುವಕರು ಧೃತಿಗೆಡುವ ಪ್ರಮೇಯವಿಲ್ಲ ಎಂದು ಯುವಕರಲ್ಲಿ ಧೈರ್ಯ ತುಂಬಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ರಾಜ್ಯ ಎಸ್ಐಆರ್ ಸಂಚಾಲಕ ಎಸ್. ದತ್ತಾತ್ರಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ಪ್ರಮುಖರಾದ ಮಾಲತೇಶ್, ಟಿ.ಡಿ.ಮೇಘರಾಜ್, ಸಂತೋಷ್, ಸಂಜಯ್ಕುಮಾರ್, ದರ್ಶನ್, ಅರುಣ್ ಕುಗ್ವೆ, ಬೆಣ್ಣೆ ಪ್ರವೀಣ ಮೊದಲಾದವರಿದ್ದರು.
ನಮ್ಮ ಮನೆಗೆ ಕಲ್ಲು ಹೊಡೆದರೆ ಸುಮ್ಮನೆ ಕುಳಿತುಕೊಳ್ಳುವವರಲ್ಲ ಎಂಬ ಸಂದೇಶವನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ಗೆ ನೀಡಿದ್ದಾರೆ. ಕಾಕ್ರೋಚ್ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕೈವಾಡದ ಬಣ್ಣ ಬಯಲಾಗಿದೆ. ಮುಂದಿನ ಎರಡುವರೆ ವರ್ಷ ಕಾರ್ಯಕರ್ತರು ಸವಾಲು ಎದುರಿಸಬೇಕಾಗಿದೆ. ಬಿಜೆಪಿ ಯುವ ಕಾರ್ಯಕರ್ತರು ಪ್ರಧಾನಿ ಮೋದಿಯವರ ಮಹತ್ವಾಂಕಾಂಕ್ಷೆಯ ಎಸ್ಐಆರ್ ನ್ನು ಯಶಸ್ವಿಗೊಳಿಸುತ್ತಾರೆ.
-ಬಿ.ವೈ.ರಾಘವೇಂದ್ರ, ಸಂಸದ