ಶಿವಮೊಗ್ಗ,ಸೆ.09: ನಗರದ ಆರ್.ಎಂ.ಎಲ್. ನಗರದ ಕಿಣಿ ಲೇಔಟ್ನಲ್ಲಿರುವ ಪತ್ರಿಕಾ ಸಂಪಾದಕ ಶಿ.ಜು.ಪಾಶಾ ಅವರ ಮನೆಯಲ್ಲಿ ಭಾರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ಕಳ್ಳರು ದೋಚಿದ್ದಾರೆ.

ತಂದೆಯ ಮನೆಯಲ್ಲಿ ಆಯೋಜಿಸಲಾಗಿದ್ದ ಖುರಾನ್ ಪಠಣ ಕಾರ್ಯಕ್ರಮಕ್ಕೆ ಶಿ.ಜು.ಪಾಶಾ ಅವರು ,ಪತ್ನಿಯೊಂದಿಗೆ ತೆರಳಿದ್ದಾಗ, ಮಕ್ಕಳು ಶಾಲೆಗೆ ಹೋಗಿದ್ದು ಹಾಡುಹಗಲೇ ಈ ಘಟನೆ ಸಂಭವಿಸಿದೆ. ಪೂಜೆ ಮುಗಿದ ಬಳಿಕ ಪಾಶಾ ಅವರು ಕಚೇರಿಗೆ ತೆರಳಿದ್ದರೆ, ಅವರ ಪತ್ನಿ ಸಂಜೆ 4 ಗಂಟೆಗೆ ಮನೆಗೆ ಹಿಂತಿರುಗಿದ್ದಾರೆ.
ಈ ವೇಳೆ ಮನೆಯ ಮುಖ್ಯ ಬಾಗಿಲಿನ ಬೀಗ ಮುರಿದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.
ಮನೆಯ ಒಳನುಗ್ಗಿದ ಖದೀಮರು ಬೆಲೆಬಾಳುವ ಆಭರಣಗಳನ್ನು ದೋಚಿದ್ದಾರೆ.
ದೂರಿನ ಅನ್ವಯ 29 ಗ್ರಾಂ ತೂಕದ ನೆಕ್ಲೇಸ್, 15 ಗ್ರಾಂ ತೂಕದ ಹ್ಯಾಂಗಿಂಗ್ಸ್, 8 ಗ್ರಾಂನ ಬ್ರೇಸ್ಲೆಟ್, 10 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು, 200 ಗ್ರಾಂ ತೂಕದ ಮೂರು ಜೊತೆ ಬೆಳ್ಳಿ ಕಾಲುಚೈನ್ಗಳು ಹಾಗೂ 1,50,000 ರೂಪಾಯಿ ನಗದು ಹಣ ಸೇರಿ ಒಟ್ಟು ಅಂದಾಜು ಅಂದಿನ ದರದಂತೆ 6.57 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕದ್ದೊಯ್ಯಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಆ ಕ್ಷಣದಲ್ಲಿ ತಕ್ಷಣ ಸ್ಪಂದಿಸಿದ ದೊಡ್ಡಪೇಟೆ ಪೊಲೀಸರು ಪತ್ತೆಗೆ ಅಗತ್ಯ ಕ್ರಮಕೈಗೊಂಡಿದ್ದಾರೆ.

ಶೀಘ್ರ ಕಳ್ಳರ ಪತ್ತೆಗೆ ಸೂಚನೆ:
ಪತ್ರಕರ್ತ ಪಾಶಾ ಅವರ ಮನೆಯಲ್ಲಿ ಹಾಡುಹಗಲೇ ನಡೆದ ಕಳ್ಳತನ ಪ್ರಕರಣವನ್ನು ಶೀಘ್ರವಾಗಿ ಬೇಧಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲು ಜಿಲ್ಲಾ ರಕ್ಷಣಾಧಿಕಾರಿ ನೂತನ್ ಅವರು ಸೂಚಿಸಿದ್ದಾರೆ.