ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನ ಫಲವಾಗಿ ಕೇಂದ್ರ ಬಜೆಟ್ನಲ್ಲಿ ಘೋಷಣೆಯಾದ ಭದ್ರಾವತಿಯಿಂದ ಚಿಕ್ಕಜಾಜೂರುವರೆಗಿನ ನೂತನ ರೈಲ್ವೆ ಮಾರ್ಗದ ಸರ್ವೆಗೆ ಅಂತಿಮ ಆದೇಶ ಹೊರಬಿದ್ದಿದೆ.
ನೂತನ ರೈಲ್ವೆ ಮಾರ್ಗದ ಕಾಮಗಾರಿಯನ್ನು ಶೀಘ್ರವೇ ಆರಂಭಿಸುವ ದೃಷ್ಠಿಯಿಂದ ಈ ಆದೇಶ ಹೊರ ಬಿದ್ದಿದ್ದು, ಇಷ್ಟರಲ್ಲಿಯೇ ಸರ್ವೆ ಆರಂಭಗೊಂಡು ಕಾಮಗಾರಿ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಈ ಕುರಿತು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿಕೆ ನೀಡಿದ್ದು, ಮಲೆನಾಡು ಮತ್ತು ಬಯಲುಸೀಮೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಮಲೆನಾಡಿನ ಆರ್ಥಿಕ ಅಭಿವೃದ್ದಿಗೆ ಹೊಸ ಮೈಲುಗಲ್ಲು ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಲೆನಾಡಿಗೆ ರಾಜ್ಯದ ಎಲ್ಲಾ ಮೂಲೆಗಳಿಗೆ ಉತ್ತಮ ಸಂಪರ್ಕ ದೊರೆಯುವ ಮೂಲಕ ಜನಸಾಮಾನ್ಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪೂರಕವಾಗುತ್ತದೆ. ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ಕೂಡ ನಿರ್ಮಾಣವಾಗುತ್ತದೆ. ಈ ಎಲ್ಲ ದೂರದೃಷ್ಟಿ ಇಟ್ಟುಕೊಂಡು ಭದ್ರಾವತಿ- ಚಿಕ್ಕಜಾಜೂರು ನಡುವಣ ರೈಲ್ವೆ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಯೋಜನೆಯೂ ಸೇರಿ

ರಾಜ್ಯದ ಎಲ್ಲಾ ನೂತನ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಬೆಂಬಲವಾಗಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ತಾವು ಧನ್ಯವಾದ ಸಲ್ಲಿಸುವುದಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭದ್ರಾವತಿ-ಚಿಕ್ಕಜಾಜೂರು ರೈಲ್ವೆ ಮಾರ್ಗ ಶುರುವಾದರೆ, ಮಲೆನಾಡು, ಬಯಲು ಸೀಮೆ ಹಾಗೂ ಅರೆ ಮಲೆನಾಡು ಭಾಗಗಳ ಸಂಪರ್ಕ ಸಾಧ್ಯತೆಯಿಂದ ವ್ಯಾಪಾರ, ವ್ಯವಹಾರ, ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಬಲ ದೊರೆಯುತ್ತದೆ ಇದರೊಂದಿಗೆ ಮಲೆನಾಡಿನ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ.
- ಬಿ.ವೈ. ರಾಘವೇಂದ್ರ , ಸಂಸದ