ಶಿವಮೊಗ್ಗ: ಕಳೆದ ಒಂದು ವಾರದಿಂದ ಕುಡಿಯುವ ನೀರು ಸರಬರಾಜು ಇಲ್ಲದೇ ಇರುವುದರಿಂದ ನಿನ್ನೆ ಸಂಜೆ ನಗರದ ಸಹ್ಯಾದ್ರಿ ನಗರದ ನಾಗರೀಕರು ಪ್ರತಿಭಟನೆ ಹಮ್ಮಿಕೊಂಡಿದ್ದರು.

ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಸ್ಥಳೀಯ ನಿವಾಸಿಗಳು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ತಕ್ಷಣ ಭೇಟಿ ನೀಡಿ, ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು.

ಸ್ಥಳೀಯರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕುಡಿಯುವ ನೀರು ಸರಬರಾಜು ಮಂಡಳಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಿ, ರಾತ್ರಿ ೧೦ ಗಂಟೆಯಿಂದ ಬಡಾವಣೆಗೆ ನೀರಿನ ಸರಬರಾಜು ಪ್ರಾರಂಭಿಸಲಾಯಿತು.

ಸ್ಥಳೀಯರು ಈ ಕ್ರಮಕ್ಕೆ ತೃಪ್ತಿ ವ್ಯಕ್ತಪಡಿಸಿ, ತಮ್ಮ ಧ್ವನಿಗೆ ಸ್ಪಂದನೆ ದೊರೆತಿರುವುದಕ್ಕೆ ಶಾಸಕರಿಗೆ ಕೃತಜ್ಞತೆ ತಿಳಿಸಿದರು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ತಡೆಯುವ ನಿಟ್ಟಿನಲ್ಲಿ, ನಿರಂತರ ನಿಗಾವಹಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಶಾಸಕರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಹ್ಯಾದ್ರಿ ನಗರದ ಪ್ರಮುಖರಾದ ಲಕ್ಷ್ಮೀನಾರಾಯಣ್, ಮಂಜಪ್ಪ, ಗಿರೀಶ್, ರಾಘವೇಂದ್ರ ಸೇರಿದಂತೆ ಹಲವರಿದ್ದರು.