
ಅತಿಯಾದ್ರೆ ಅಮೃತವೂ ವಿಷ
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ 41
- ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ: ಅರಹತೊಳಲು, ಭದ್ರಾವತಿ)
ಈ ಜಗತ್ತಿನಲ್ಲಿ ಕೆಟ್ಟದ್ದನ್ನು ಮಾಡುವುದು ನಿಜಕ್ಕೂ ಕೆಟ್ಟದ್ದೆ ಹೌದು ಹಾಗೆಯೇ ಅತಿಯಾದ ಒಳ್ಳೆತನ ಅತಿಯಾದ ವಿಶ್ವಾಸ ಅತಿಯಾದ ನಂಬಿಕೆ ಅತಿಯಾದ ಕಳಕಳಿ ಅತ್ಯಂತ ಕೆಟ್ಟದ್ದು ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.
ಅತಿಯಾದರೆ ಯಾವುದೇ ಆಗಲಿ ಅದು ಪತ್ಯವಾಗದು, ಇಷ್ಟವಾಗದು, ಅದು ವಿಷವಾಗಬಹುದು ಎಂಬುದನ್ನು ಒಳಗೊಂಡಂತಹ ಬದುಕನ್ನು ಅರ್ಥ ಮಾಡಿಕೊಳ್ಳುವ ಅತ್ಯಂತ ಅಗತ್ಯದ ಸನ್ನಿವೇಶ ನಮ್ಮ ನಡುವೆ ಕಾಣಿಸಿಕೊಂಡಿರುವುದು ಸದ್ಯದ ವಿಶೇಷ ಸಂಗತಿ ಎಂದರೆ ತಪ್ಪಾಗಲಿಕ್ಕಿಲ್ಲ.
ಹೊಟ್ಟೆ ಹಸಿದಾಗ ಅನ್ನದ ಬೆಲೆ, ತಿನ್ನುವ ಆಹಾರದ ಬೆಲೆ ಅರ್ಥವಾಗುತ್ತದೆ. ಹೊಟ್ಟೆ ತುಂಬಿದವನಿಗೆ ಹೋಳಿಗೆಯಲ್ಲಿ ಮುಳ್ಳು ಸಿಗುತ್ತದೆ ಎಂಬ ಗಾದೆಯ ಮಾತು ನಮ್ಮ ನಡುವೆ ಕೇಳಿ ಬರುತ್ತಿದೆ. ಒಂದಿಷ್ಟು ಒಳ್ಳೆಯತನ ನಮ್ಮ ನಡುವೆ ಇದ್ದರೆ ಪರವಾಗಿಲ್ಲ. ಅದೇ ಅತಿಯಾದ ಒಳ್ಳೆತನವಾದರೆ ನಾವು ಅದಕ್ಕಿಂತ ಘೋರವಾದ ಶಿಕ್ಷೆಯನ್ನು ಅನುಭವಿಸಲು ಮತ್ತೊಂದು ಮಾರ್ಗ ಅನಗತ್ಯ ಎನಿಸುತ್ತದೆ.









ಅಯ್ಯೋ ಪಾಪ ಎಂಬ ಕನಿಕರ ಸಾಮಾನ್ಯವಾಗಿರಲಿ. ಅದು ಅತಿಯಾಗದಿರಲಿ. ಯಾರೂ ನಿಮ್ಮ ಹಿಂದೆ ಬರುವುದಿಲ್ಲ. ಯಾರ ಬಗ್ಗೆಯೂ ನಂಬಿಕೆ ಹೆಚ್ಚಾಗಿರುವುದು ಒಳ್ಳೆಯದಲ್ಲ ಅಲ್ಲವೇ?
ನಾನು ಸತ್ಯ ಹರಿಶ್ಚಂದ್ರನ ತುಂಡು, ನಾನು ಮನುಷ್ಯತ್ವವನ್ನು ಹೊಂದಿದವನು ನಾನು ತುಂಬಾ ಒಳ್ಳೆಯವನು ಎಂದು ನೀವು ತೋರಿಸಿಕೊಟ್ಟರೆ ನಿಮ್ಮನ್ನು ಪಕ್ಕದಲ್ಲಿ ನಿಂತು ಮಳ್ಳು ಮಾಡಿ ನಿಮ್ಮ ವ್ಯಕ್ತಿತ್ವವನ್ನೇ, ಉದಾರತೆಯನ್ನೇ ಮಾರಿಕೊಳ್ಳುವ ಸಾಕಷ್ಟು ನಿದರ್ಶನಗಳನ್ನು ನಮ್ಮ ನಡುವೆ ನಿರಂತರವಾಗಿ ಕಾಣುತ್ತಿದ್ದೇವೆ. ಒಳ್ಳೆಯವರಾಗಿ ಆದರೆ ಅತಿಯಾದ ಒಳ್ಳೆಯವರಾಗಬೇಡಿ. ನನ್ನಿಂದಲೇ ಈ ಜಗತ್ತು ಅಥವಾ ನೊಂದವರಿಗೆ ನೆರಳು ಎಂದು ಯಾವತ್ತೂ ಯೋಚಿಸಬೇಡಿ. ನೊಂದು ಬಂದೆ ಎಂದು ಹೇಳುವ ನಿಜವಾಗಿಯೂ ನೊಂದಿರುತ್ತಾನೋ ಅಥವಾ ನಿಮ್ಮಲ್ಲಿನ ಅತಿಯಾದ ಒಳ್ಳೆತನವನ್ನು ಯಾಮಾರಿಸಲು ನಿಮ್ಮ ಬಳಿ ಬಂದಿರುತ್ತಾನೋ ಎಂಬುದನ್ನು ಸರಿಯಾಗಿ ಅವಲೋಕಿಸುವ ಅಗತ್ಯತೆ ಅತಿ ಮುಖ್ಯವಾಗಿದೆ ಅಲ್ಲವೇ?

ಅದೆಷ್ಟೋ ಬಾರಿ ನಮ್ಮ ನಡುವಿನ ಅಮೃತವೂ ಸಹ ಕಹಿಯಾಗುತ್ತದೆ ಅಥವಾ ವಿಷವಾಗುತ್ತದೆ ಎಂಬುದನ್ನು ನಾವು ಅವಲೋಕಿಸುತ್ತಲೇ ಸಾಕಷ್ಟು ನಿದರ್ಶನಗಳನ್ನು ನೋಡಿದ್ದೇವೆ. ಹಾಗೆಯೇ ಒಳ್ಳೆಯತನ ನಮಗೆ ಸದ್ದು ಮಾಡದೆ ಯಾಮಾರಿಸಿ, ವಂಚಿಸುವ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ನಾವು ನೈಜ ಘಟನೆಗಳ ಹಿನ್ನೆಲೆಯಲ್ಲಿ ಅವಲೋಕಿಸಿ, ಅರಿತುಕೊಳ್ಳುವ ಅಗತ್ಯವಿದೆ.
ಒಂದಿಷ್ಟು ಇತಿಹಾಸದ ಘಟನಾವಳಿಗಳನ್ನು ನಮ್ಮ ಬದುಕಿನ ಹಿನ್ನೆಲೆಗಳನ್ನು ಗಮನಿಸಿದಾಗ ನಾವು ನಮ್ಮ ಒಳ್ಳೆಯತನವನ್ನು ಕೆಲವೆಡೆ ದುಷ್ಟರ ಕೂಟಕ್ಕೆ. ಕಿರಾತಕರ ಮನಸಿಗೆ ಮಾರಿಕೊಂಡು ಬಿಡುತ್ತೇವೆ. ಕೊನೆಗೆ ಅದೇ ವಿಷಯದಲ್ಲಿ ಪರಿತಪಿಸಿ ನೋವಲ್ಲಿ ತೇಲುವ, ಮನದ ಮೂಲೆಯಲ್ಲಿ ನೋವನ್ನು ತುಂಬಿಕೊಳ್ಳುವ, ಸದ್ದಿಲ್ಲದೆ ಆಕ್ರೋಶವನ್ನು ಬರಿಸಿಕೊಳ್ಳುವ ಕಾಯಕಕ್ಕೆ ಮುಂದಾಗುವುದು ಏಕೆ ಬೇಕು,?

ಹಾಗಾಗಿ ಒಂದಿಷ್ಟು ನಮ್ಮ ಅತಿಯಾದ ಒಳ್ಳೆಯತನಕ್ಕೆ ಬ್ರೇಕ್ ಇರಲಿ. ಹಾಗೆಂದು ಕಿರಾತಕ ಮನಸುಗಳು ಮೋಸ ಮಾಡಿದವು ಎಂಬ ಕಾರಣಕ್ಕೆ ನಮ್ಮಲ್ಲಿ ಕೆಟ್ಟತನವನ್ನು ಬೆಳೆಸಿಕೊಳ್ಳುವುದು ಬೇಡ. ಮೋಸ ಮಾಡಿದವನು ಇದೇ ಜನುಮದಲ್ಲಿ, ಇದೇ ಕ್ಷಣದಲ್ಲಿ ಅನುಭವಿಸುತ್ತಾನೆ ಎಂಬ ದೊಡ್ಡ ನಂಬುಗೆಯೊಂದಿಗೆ ಶಾಶ್ವತ ತಿಲಾಂಜಲಿ ಹಾಡಿ.