
” ಇಂದು ಯುವಜನರನ್ನು ನಾಲ್ಕು ಗೋಡೆಗಳಿಂದ ಆಚೆ ಕರೆತಂದು ಅವರನ್ನು ಒಂದುಗೂಡಿಸಿ ಕ್ರಿಯಾಶೀಲಗೊಳಿಸುವಲ್ಲಿ ಎನ್ಎಸ್ಎಸ್ ಮುಖ್ಯ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳು ಎನ್ಎಸ್ಎಸ್ ಮೂಲಕ ತಂಡ ತಂಡವಾಗಿ ಗ್ರಾಮೀಣ ಪ್ರದೇಶಕ್ಕೆ ತೆರಳಿ, ಅಲ್ಲಿ ವಾಸ್ತವ್ಯ ಹೂಡಿ ಗ್ರಾಮೀಣ ಜನರಲ್ಲಿ ಜಾಗೃತಿಯನ್ನು ಉಂಟುಮಾಡುತ್ತಿದ್ದಾರೆ. ಗಾಂಧಿಯವರು ಹೇಳಿದ ಸೇವೆ, ಸ್ವಚ್ಛತೆ, ಸ್ವಾವಲಂಬನೆಯ ತತ್ವ ಸಿದ್ಧಾಂತವನ್ನು ಅನುಷ್ಠಾನಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಗಾಂಧಿ ತತ್ವ ಚಿಂತನೆ ಸೇವಾ ಪ್ರತಿಪಾದನೆಯಲ್ಲಿ ಎನ್ಎಸ್ಎಸ್ ನ ಪಾತ್ರ ಹಿರಿದು. ವಿದ್ಯಾರ್ಥಿ ಜೀವನದಲ್ಲಿ ಎಂದೂ ಮರೆಯದ ಅನೇಕ ಅನುಭವವನ್ನು ಇದು ತಂದುಕೊಡುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಸೇವೆ ಎನ್ನುವುದು ಹಣದ ಮೂಲಕ ಅಳೆಯುವ ಮೌಲ್ಯವಾಗಿರುವಾಗ ಎನ್ಎಸ್ಎಸ್ ನಿಸ್ವಾರ್ಥ ಸೇವಾ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ತುಂಬುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ” ಎಂದು ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ. ಸಾಕಮ್ಮ ಬಿ.ಅವರು ಹೇಳಿದರು.

ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿವಿ ಮಟ್ಟದ ಅಂತರ್ ಕಾಲೇಜು ಶಿಬಿರದ ಸಮರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯು ಎಸ್ ಎಮ್ ಆರ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಧರ್ಮೇಗೌಡರು, “ಕಾಲೇಜು ಹಂತದಲ್ಲಿ ಎನ್ಎಸ್ಎಸ್ ಕಾರ್ಯ ಚಟುವಟಿಕೆಗಳನ್ನು ಬಲಪಡಿಸುವಲ್ಲಿ ವಿಶ್ವವಿದ್ಯಾಲಯವು ನೀಡುತ್ತಿರುವ ಬೆಂಬಲ ಶ್ಲಾಘನೀಯ” ವೆಂದು ಅಭಿಪ್ರಾಯಪಟ್ಟರು. ಎನ್ಎಸ್ಎಸ್ ನ ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ದಿವ್ಯ ವಿ ಪಿ ಅವರು ಮಾತನಾಡಿ, “ಜೀವನದ ಸಾರ್ಥಕತೆ ಕಂಡುಕೊಳ್ಳಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಇಂಥ ಅವಕಾಶಗಳು ದೊರೆಯಬೇಕು. ಸಹನೆ ತಾಳ್ಮೆ ಹೊಂದಿಕೊಂಡು ಹೋಗುವ ಅನೇಕ ಗುಣಗಳನ್ನು ಈ ಶಿಬಿರವು ಕಲಿಸುತ್ತದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆಯವರು ಶಿಬಿರದ ಯಶಸ್ಸಿಗೆ ಕಾರಣರಾದ ಸರ್ವರನ್ನು ಸ್ಮರಿಸಿದರು. ಕಾರ್ಯಕ್ರಮಾಧಿಕಾರಿಗಳಾದ ಶ್ರೀ ದೇವೇಂದ್ರ, ಶ್ರೀ ಗಿರಿಧರ್, ಶ್ರೀ ಅರುಣ್ ಕುಮಾರ್, ಹಿರಿಯ ಎನ್ಎಸ್ಎಸ್ ಸ್ವಯಂಸೇವಕರಾದ ಶ್ರೀ ಮಾಲತೇಶ್, ರಂಜನ್ ಘನತೆ,ಸ್ವರೂಪ್, ಕೌಶಿಕ್, ಜೀವನ್ ಶೋಭಿತ್, ಅರ್ಪಿತ, ಮೇಘನ ಹಾಗೂ ಕಚೇರಿ ಸಿಬ್ಬಂದಿಗಳಾದ ಶ್ರೀಮತಿ ಮಾಲಾ, ಶ್ರೀ ರಾಚಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಏಳು ದಿನದ ಶಿಬಿರದ ತಮ್ಮ ಅನುಭವವನ್ನು ವಿದ್ಯಾರ್ಥಿಗಳು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಪ್ರೊ. ಸಾಕಮ್ಮ ಬಿ. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.