
ಶಿವಮೊಗ್ಗ: ರಂಗಭೂಮಿ ಕ್ಷೇತ್ರವು ತಂತ್ರಜ್ಞಾನದ ಪರಿಣಾಮ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಉತ್ತಮ ಪ್ರೇಕ್ಷಕರು ಇರುವವರೆಗೂ ನಾಟಕ ಕ್ಷೇತ್ರ ನಿರಂತರವಾಗಿ ಮುನ್ನಡೆಯುತ್ತದೆ ಎಂದು ನಟ ಪ್ರಕಾಶ್ ಬೆಳವಾಡಿ ಹೇಳಿದರು.
ಬಹುಮುಖಿ ಸಂಘಟನೆಯಿಂದ ಬುಧವಾರ ಆಯೋಜಿಸಿದ್ದ 50ನೇ ಕಾರ್ಯಕ್ರಮದಲ್ಲಿ ರಂಗಭೂಮಿ ತಂತ್ರಜ್ಞಾನ ಕುರಿತು ಮಾತನಾಡಿ, ತಂತ್ರಜ್ಞಾನ ಅನೇಕ ಕ್ಷೇತ್ರಗಳ ಅನುಕೂಲ ಮತ್ತು ಪ್ರತಕೂಲ ಪರಿಣಾಮ ಬೀರುತ್ತಿರುವುದು ವಾಸ್ತವ ಸಂಗತಿ. ರಂಗಭೂಮಿ ಮೇಲೂ ತಂತ್ರಜ್ಞಾನ ಪರಿಣಾಮ ಬೀರಿದೆ ಎಂದು ತಿಳಿಸಿದರು.

ಸಿನಿಮಾ ಒಂದೇ ಸಮಯದಲ್ಲಿ ಸಾವಿರಾರು ಪರದೆಗಳ ಮೇಲೆ ಪ್ರದರ್ಶನ ಆಗಲು ಸಾಧ್ಯವಿದೆ. ಈ ಮೂಲಕ ಕೋಟ್ಯಂತರ ರೂ. ಹಣ ಗಳಿಸಲು ಸಾಧ್ಯವಿದೆ. ಆದರೆ ನಾಟಕ ಕ್ಷೇತ್ರ ಕಲಾವಿದ ಮತ್ತು ಪ್ರೇಕ್ಷಕನ ನಡುವೆ ಬಾಂಧವ್ಯ ಮೂಡಿಸುತ್ತದೆ. ತಂತ್ರಜ್ಞಾನ ದುಬಾರಿ ಆಗಿರುವುದರಿಂದ ಅಳವಡಿಸಿಕೊಳ್ಳಲು ಕಷ್ಟ. ಹೆಚ್ಚಿನ ಹಣ ಅವಶ್ಯಕವಾಗಿ ಬೇಕಾಗುತ್ತದೆ. ಆದರೆ ತಂತ್ರಜ್ಞಾನದ ಹೊರತಾಗಿ ಉತ್ತಮ ನಾಟಕ ಮೂಡಿಬರಲು ಸಾಧ್ಯವಿದೆ ಎಂದರು.

ಸಿನಿಮಾ ಏಕಕಾಲಕ್ಕೆ ಸಾವಿರಾರು ಪರದೆಗಳಲ್ಲಿ ಪ್ರದರ್ಶನಗೊಂಡು ವಿಮರ್ಶೆ ಪ್ರಕಟ ಆಗುವ ಮುನ್ನವೇ ಕೋಟ್ಯಂತರ ರೂಪಾಯಿ ಗಳಿಸುತ್ತದೆ. ಆದರೆ ನಾಟಕ ಹತ್ತಾರು ಕಡೆ ಪ್ರದರ್ಶನ ಏಕಕಾಲದಲ್ಲಿ ಸಾಧ್ಯವಾಗುವುದಿಲ್ಲ. ಸಿನಿಮಾಗಳಿಗೆ ದೊಡ್ಡ ಮಟ್ಟದ ಪ್ರಚಾರ ನೀಡಿದಂತೆ ನಾಟಕಗಳಿಗೂ ದೊಡ್ಡ ಪ್ರಚಾರ ನೀಡಲು ಸಾಧ್ಯವಿಲ್ಲ. ಇದರಿಂದ ನಾಟಕ ಕ್ಷೇತ್ರ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.

ಬಹುಮುಖಿ ಸಂಘಟಕ ಪ್ರೊ ಎಚ್.ಎಸ್.ನಾಗಭೂಷಣ, ಜಿ.ವಿಜಯಕುಮಾರ್, ಅನಿಲಕುಮಾರ್ ಭೂಮರಡ್ಡಿ, ಡಾ. ಉಷಾ ರಮೇಶ್, ಕಾಂತೇಶ್ ಕದರಮಂಡಲಗಿ, ಡಾ. ಕೆ.ಜಿ.ವೆಂಕಟೇಶ್ ಇತರರಿದ್ದರು.