
ಸಾಗರ(ಶಿವಮೊಗ್ಗ),ಏ,೦೮:ತಾಲ್ಲೂಕಿನ ಸೊರಬ ವಿದಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ರೆವಿನ್ಯೂ ಇನ್ಸ್ಪೆಕ್ಟರ್ ಮಂಜುನಾಥ್ ರೈತರೊಬ್ಬರಿಂದ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದ ಘಟನೆ ಶಿರೂರು ಆಲಳ್ಳಿಯಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ.

ಮುಂಡಿಗೆಹಳ್ಳದ ಕೃಷ್ಣಮೂರ್ತಿ ಅವರು ತಮ್ಮ ಜಮೀನನ್ನು ಕೆಲಸಗಾರರಿಂದ ಸಮತಟ್ಟುಗೊಳಿಸುತ್ತಿದ್ದಾಗ ತಾಳಗುಪ್ಪದ ಕಂದಾಯ ನಿರೀಕ್ಷಕ ಮಂಜುನಾಥ್ ಜಮೀನಿನ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಕೆಲಸ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.ಆದರೇ ನಿಯಮದ ಪ್ರಕಾರ ಯಾವುದೇ ಲಿಖಿತ ನೋಟೀಸ್ ನೀಡದೆ ಕೇವಲ ಬೆದರಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಅದರಂತೆ ದೂರುದಾರ ಕೃಷ್ಣಮೂರ್ತಿಯವರು ಫೋನ್ ಪೇ ಮೂಲಕ ೨೫೦೦ ರೂ.ಲಂಚದ ಹಣವನ್ನು ಕಂದಾಯ ನಿರೀಕ್ಷಕ ಮಂಜುನಾಥ್ ಅವರಿಗೆ ವರ್ಗಾಯಿಸಿದ್ದಾರೆ.ಹೀಗೆ ಪೋನ್ಪೇ ಮೂಲಕ ಹಣ ಪಡೆದುಕೊಂಡು ಪುನಃ ೩೦೦೦ ರೂ ಲಂಚದ ಹಣವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದರು.

ಕಂದಾಯ ನಿರೀಕ್ಷಕ ಮಂಜುನಾಥ್ ಅವರ ಹಣದ ದಾಹವನ್ನು ಗ್ರಹಿಸಿದ ಮುಂಡಿಗೆಹಳ್ಳದ ಕೃಷ್ಣಮೂರ್ತಿ ಅವರು ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿ ಪ್ರಾಥಮಿಕ ಸಾಕ್ಷಿ ಒದಗಿಸಿದ ಪರಿಣಾಮ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಪ್ರಕರಣದ ಗಂಭೀರತೆಯನ್ನು ಅರಿತು ಲಂಚಕೋರನ ವಿರುದ್ಧ ಕಾರ್ಯಾಚರಣೆಗೆ ಮುಂದಾಗುತ್ತಾರೆ.

ಮುಂಡಿಗೆಹಳ್ಳದ ಕೃಷ್ಣಮೂರ್ತಿ ಅವರಿಂದ ಎರಡನೇ ಕಂತು ಲಂಚದ ಹಣ ಪಡೆಯುತ್ತಿರುವಾಗ ದಾಳಿ ಮಾಡಿದ ಲೋಕಾಯುಕ್ತ ಪೋಲೀಸರು ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಲಂಚದ ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ನಿರೀಕ್ಷಕ ಮಂಜುನಾಥ್ ಅವರ ವಿಚಾರಣೆ ನಡೆಯುತ್ತಿದೆ.

ಶಿವಮೊಗ್ಗದ ಲೋಕಾಯುಕ್ತ ಡಿವೈಎಸ್ಪಿ ಬಿ ಪಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ವೀರಬಸಪ್ಪ.ಎಲ್.ಕುಸಲಾಪುರ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಟೀಕಪ್ಪ, ಮಂಜುನಾಥ,ಸುರೇಂದ್ರ, ಯೋಗೇಶ್,ಪ್ರಶಾಂತ್ ಕುಮಾರ್, ಚನ್ನೇಶ್,ದೇವರಾಜ್, ಅರುಣ್ ಕುಮಾರ,ಪ್ರಕಾಶ್ ಬಾರಿಮರದ. ಸಿಪಿಸಿ, ಆದರ್ಶ,ಚಂದ್ರಿಬಾಯಿ, ಪ್ರದೀಪ, ಗೋಪಿ,ಜಯಂತ್.ತರುಣ್ ಕುಮಾರ್, ಗಂಗಾಧರ, ಆನಂದ ಪಾಲ್ಗೊಂಡಿದ್ದರು