
ಶಿವಮೊಗ್ಗ,ಏ.08: ಕರ್ನಾಟಕ ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಾಂನರಿಗೆ ಶೇ.4ರಷ್ಟು ಮೀಸಲಾತಿ ನೀಡುತ್ತಿರುವುದನ್ನು ವಿರೋಧಿಸಿ ಈ ವಿಧೇಯಕ್ಕೆ ಒಪ್ಪಿಗೆ ಕೊಡಬಾರದು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಂರಿಗೆ ಶೇ.4ರಷ್ಟು ಮೀಸಲಾತಿಯನ್ನು ಪರಿಚಯಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಇದು ಸಂವಿಧಾನಕ್ಕೆ ವಿರೋಧವಾಗಿದೆ. ಸಂವಿಧಾನದ ಆರ್ಟಿಕಲ್ 15ರಲ್ಲಿ ರಾಜ್ಯವು ಧರ್ಮ ಮತ್ತು ಜಾತಿ ಆಧಾರದ ಮೇಲೆ ನಾಗರೀಕರ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಬಾಬ ಸಾಹೇಬ್ ಅಂಬೇಡ್ಕರ್ ಕೂಡ ಸಂವಿಧಾನ ರಚಿಸುವಾಗಲೇ ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸಿದ್ದರು. ವಿವಿಧ ರಾಜ್ಯಗಳಲ್ಲಿ ನ್ಯಾಯಾಲಯವು ಕೂಡ ಇದನ್ನು ತಿರಸ್ಕರಿಸಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಈ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಬಾರದು. ಇದು ರಾಷ್ಟಿçÃಯ ಸಮಗ್ರತೆ ಮತ್ತು ಏಕತೆ ಧಕ್ಕೆ ತರುತ್ತದೆ. ಈ ನಿಟ್ಟಿನಲ್ಲಿ ಮಸೂದೆಯನ್ನು ಅನುಮೋದಿಸದೆ ತಡೆಯಿಡಿಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷದ್ನ ಅಧ್ಯಕ್ಷ ವಾಸುದೇವ ಜೆ.ಆರ್., ಬಜರಂಗ ದಳದ ಜಿಲ್ಲಾ ಸಂಯೋಜಕ ವಡಿವೇಲು ರಾಘವನ್, ಪ್ರಮುಖರಾದ ರಮೇಶ್ ಬಾಬು ಜಾಧವ್, ಆನಂದರಾವ್ ಜಾಧವ್, ಅಂಕುಶ್ ಸೇರಿದಂತೆ ಹಲವರಿದ್ದರು.