
ಶಿವಮೊಗ್ಗ: ಧರ್ಮ ಎನ್ನುವುದು ಪರಸ್ಪರ ಬೇಧ ಮರೆತು ಒಂದು ಗೂಡಿಸುವ ಶಕ್ತಿ ಎಂದು ಬಸವಕೇಂದ್ರದ ಶ್ರೀ ಡಾ. ಬಸವಮರುಳಸಿದ್ಧ ಸ್ವಾಮೀಜಿ ಹೇಳಿದರು.
ಅವರು ಇಂದು ವಿನೋಬನಗರದ ಶ್ರೀ ರಕ್ತೇಶ್ವರಿ ಮತ್ತು ಮಳಲ ಗಿಡ್ಡಮ್ಮ ದೇವಾಲಯದ ೮ನೇ ವರ್ಷದ ವಾರ್ಷಿಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಮನಸ್ತಾಪದಿಂದ ದೂರವಾದವರು ವೈಯಕ್ತಿಕ ಪ್ರೀತಿ ವಿಶ್ವಾಸಗಳ ಕೊರತೆ ಇರುವವರು ಕೂಡ ಧರ್ಮದ ಮೂಲಕ ಒಂದಾಗುತ್ತಾರೆ. ಇಂತಹ ದೊಡ್ಡ ಶಕ್ತಿ ಧರ್ಮಕ್ಕಿದೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ವೈಯಕ್ತಿಕ ಪ್ರೀತಿ ವಿಶ್ವಾಸ ಮುಖ್ಯವಾಗುತ್ತದೆ. ಧಾರ್ಮಿಕ ಆಚರಣೆಗಳು ಪರಸ್ಪರ ಬೆಸೆಯುತ್ತದೆ ಎಂದರು.
ಬಟ್ಟೆ ತಯಾರು ಮಾಡುವವ ಸೂಜಿ ದಾರ ಬಳಸುವಂತೆ ಧರ್ಮವಾಗಿದೆ. ನಾವೆಲ್ಲಾ ಧರ್ಮದ ಮಾರ್ಗದಲ್ಲಿ ಸತ್ ಸಂಕಲ್ಪದಿಂದ ತಾತ್ವಿಕತೆ ಅಳವಡಿಸಿಕೊಂಡು ಬಾಳುವುದು ಮುಖ್ಯವಾಗುತ್ತದೆ. ಯಜ್ಞ ಎಂದರೆ ಕೃತಜ್ಞತೆ ಸಲ್ಲಿಸುವುದು ಎಂದರ್ಥ. ದೇವ, ಪಿತೃ, ಪ್ರಜಾ, ಆಚಾರ್ಯ, ಭೂತ ಯಜ್ಞ ಎಂಬ ೫ ಯಜ್ಞಗಳಿವೆ. ಅದ್ಭುತ ಶರೀರ ಕೊಟ್ಟು ನನಗೆ ಎಲ್ಲವನ್ನೂ ನೀಡಿದ ದೇವರ ಸಂಸ್ಮರಣೆಯೇ ದೇವಯಜ್ಞ. ಅದ್ಭುತ ಪರಂಪರೆ ನೀಡಿ ನಮಗೆ ಮಾರ್ಗದರ್ಶನ ನೀಡಿದ ಪಿತೃಗಳ ಸೇವೆ ಮಾಡುವುದೇ ಪಿತೃ ಯಜ್ಞವಾಗಿದೆ. ವೃದ್ಧಾಪ್ಯದಲ್ಲಿ ಅವರನ್ನು ಮಕ್ಕಳಂತೆ ಜೋಪಾನವಾಗಿ ನೋಡಿಕೊಂಡು ಕೃತಜ್ಞತೆ ಸಲ್ಲಿಸುವುದೇ ಪಿತೃ ಯಜ್ಞ ಎಂದರು.

ಮನುಷ್ಯ ಸಂಘ ಜೀವಿಯಾಗಿದ್ದು, ಜೀವನದ ಎಲ್ಲಾ ಸಂದರ್ಭದಲ್ಲೂ ಹಲವಾರು ಋಣಗಳಿಗೆ ಭಾಗಿಯಾಗುತ್ತಾನೆ. ಬಾಳು ಎನ್ನುವುದು ಋಣದ ರತ್ನ ಗಣಿಯಾಗಿದ್ದು, ನಾವು ಋಣಿಯಾದವರಿಗೆ ಕೃತಜ್ಞತೆ ಸಲ್ಲಿಸುವುದೇ ಪ್ರಜಾ ಯಜ್ಞ ಎಂದರು.

ತಾಯಿಯೇ ಮೊದಲ ಗುರುವಾಗಿದ್ದು, ನಮ್ಮ ಜೀವನದ ವಿವಿಧ ಸಂದರ್ಭದಲ್ಲಿ ವಿದ್ಯೆ,. ಬುದ್ಧಿ ಎಲ್ಲವನ್ನೂ ನೀಡಿ ತಿದ್ದಿ ತೀಡಿದವರಿಗೆ ಕೃತಜ್ಞತೆ ಸಲ್ಲಿಸುವುದೇ ಆಚಾರ್ಯ ಯಜ್ಞ. ಆಕಾಶ, ಗಾಳಿ, ಅಗ್ನಿ, ನೀರು, ಭೂಮಿ ಪಂಚಭೂತಗಳನ್ನು ನೀಡಿ ನಮಗೆ ಎಲ್ಲವನ್ನೂ ನೀಡಿದ ಪಂಚಭೂತಗಳಿಗೆ ಕೃತಜ್ಞತೆ ಸಲ್ಲಿಸುವುದೇ ಭೂತ ಯಜ್ಞವಾಗಿದ್ದು, ನಮ್ಮ ಅಂತರಾತ್ಮ ಶುದ್ಧವಾಗಿರಿಸಿ ತಾತ್ವಿಕತೆ ಅಳವಡಿಸಿಕೊಂಡು ಬಾಳುವುದೇ ಧರ್ಮ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಹಲವಾರು ಸಂಕಷ್ಟಗಳ ನಡುವೆಯೂ ಬೆಳೆದು ಯಶಸ್ವಿಯಾಗಿ ಸಕಲ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮುನ್ನಡೆಯುತ್ತಿರುವುದಕ್ಕೆ ಭಕ್ತರ ಸಹಕಾರವೇ ಕಾರಣ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಪ್ರಮುಖರಾದ ನಾಗರಾಜ್ ಕಂಕಾರಿ, ಸಮಿತಿ ನಿರ್ದೇಶಕ ದೀಪಕ್ ಸಿಂಗ್, ಅಧ್ಯಕ್ಷ ಭೀಮಣ್ಣ, ಮುಖ್ಯ ಅರ್ಚಕ ಶಿವಶಂಕರಮೂರ್ತಿ, ಸುದೇಶ್, ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು.