
ಶಿವಮೊಗ್ಗ: ಉತ್ತಮ ಚಿಂತನೆಗಳಿಂದ ಅರಳಬೇಕಾದ ಎಳೆಯ ಮನಸ್ಸುಗಳು ದುಶ್ಚಟಗಳಿಂದ ಕಲುಷಿತಗೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಸೂಡ ಮಾಜಿ ಅಧ್ಯಕ್ಷರಾದ ಎನ್.ರಮೇಶ್ ಬೇಸರ ವ್ಯಕ್ತಪಡಿಸಿದರು.
ನಗರದ ವಿನೋಬನಗರ ಅರವತ್ತು ಅಡಿ ಮಾರ್ಗದಲ್ಲಿರುವ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸೋಮವಾರ ಏರ್ಪಡಿಸಿದ್ದ 235 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೋಷಕರ ಅತಿಯಾದ ಮುದ್ದು ಮಕ್ಕಳನ್ನು ಹಾಳು ಮಾಡುತ್ತಿದೆ. ಹಿಂದೆ ಮಕ್ಕಳಿಗೆ ಊಟ ಮಾಡಿಸುವಾಗ ಆಕಾಶದಲ್ಲಿರುವ ಚಂದ್ರನನ್ನು, ಹಸುಗಳು, ಪ್ರಾಣಿಗಳನ್ನು ತೋರಿಸುತ್ತ ಅಜ್ಜಿ, ಅಮ್ಮ ಊಟ ಮಾಡಿಸುತ್ತಿದ್ದರು. ಅಲ್ಲಿದ್ದ ಆ ಆಪ್ತತತೆ ಕಳೆದು ಹೋಗಿವೆ. ಮಗು ಕೈಯಲ್ಲಿ ಮೊಬೈಲ್ ಕೊಟ್ಟು ಸುಮ್ಮನೆ ಊಟ ಮಾಡಿಸುವ ಕಾಲ ಬಂದಿದೆ. ಶಿಕ್ಷೆಯಿಲ್ಲದ ಶಿಕ್ಷಣ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಸೋಲುತ್ತಿದೆ. ಮಕ್ಕಳು ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವಂತಿಲ್ಲ. ಪಾನ್, ಗುಟ್ಕ, ಗಾಂಜಾದಂತಹ ಅಪೀಮುಗಳ ದಾಸರಾಗುತ್ತಿದ್ದಾರೆ. ನಿಮ್ಮ ಮಗು ಹೀಗೆ ಮಾಡುತ್ತಿದೆ ಎಂದರೂ ಒಪ್ಪಲಾರದ ಪೋಷಕರಿಗೆ, ಸಿ.ಸಿ.ಟಿ.ವಿ ಯಲ್ಲಿ ದೃಶ್ಯ ತೋರಿಸಿದರೂ ನಂಬಲಾರದ ಸ್ಥಿತಿ ಅಪಾಯಕಾರಿಯಾಗಿದೆ.

ಮಕ್ಕಳಿಗೆ ಶಾಲೆಗಿಂತ ಮನೆಯಲ್ಲಿ ಸರಿಯಾದ ಮಾರ್ಗದರ್ಶನ ಸಿಗಬೇಕು. ಶಿಕ್ಷಣದ ಜೊತೆಯಲ್ಲಿ ತಂದೆ, ತಾಯಿ ಉತ್ತಮ ಸಂಸ್ಕಾರ, ಓದುವ, ಬರೆಯುವ, ಸಾಹಿತ್ಯ ಅಭಿರುಚಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಹುಣ್ಣಿಮೆ ಬಂತೆಂದರೆ ಇವತ್ತು ಎಲ್ಲೊ ಒಂದು ಕಡೆ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ನಡೆಯುತ್ತಿದೆ ಎಂದು ನೆನಪು ಮಾಡಿಸುತ್ತದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ತನ್ನದೆ ಮಹತ್ವ ಪಡೆದಿದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ, ಸಾಹಿತ್ಯ ಹುಣ್ಣಿಮೆ ಸಾಹಿತ್ಯದ ಆಸಕ್ತ ಮನಸ್ಸುಗಳನ್ನು ಒಂದೆಡೆ ಸೇರಿಸುವಂತೆ ಮಾಡುತ್ತಿದೆ. ಸುತ್ತಲಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಲೆ ನಿರಂತರ ಕೆಲಸ ಮಾಡುತ್ತಿದ್ದೇವೆ. ಕನ್ನಡ ಉದ್ದಾರ ಆಗಬೇಕು ಎಂದು ಭಾಷಣಕ್ಕಿಂತ ಎಲ್ಲರೂ ಕೂಡಿ ವಿದ್ಯಾರ್ಥಿಗಳಲ್ಲಿ ಭಾಷಾ ಕಲಿಕೆ, ಓದಿನ ಮಹತ್ವ ಮನನ ಮಾಡಿಸಬೇಕಿದೆ. ಕಳೆದ 20 ವರ್ಷಗಳಿಂದ ಆ ಪ್ರಯತ್ನ ಮಾಡುತ್ತಿದ್ದೇವೆ. ಆಂದೋಲನದ ರೀತಿಯಲ್ಲಿ ಕನ್ನಡ ಭಾಷಾ ಶಿಕ್ಷಕರನ್ನು ಒಳಗೊಂಡಂತೆ ಶಾಲೆಗಳಿಗೆ ಹೋಗಿ ಕೆಲಸ ಮಾಡುತ್ತಿದ್ದೇವೆ. ನಮ್ಮೊಂದಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಕವಿಗಳಾದ ಮೇಗರವಳ್ಳಿ ರಮೇಶ್ ಅವರು ಭಾಪು ನೀವೀಗ ಅಪ್ರಸ್ತುತ ವಾಗುತ್ತಿರುವಿರಿ, ಎಸ್. ವಿ. ಚಂದ್ರಕಲಾ ಅವರು ಬದುಕಿನ ಆಟಗಳು, ಶಾರದಾ ಉಳುವೆ ಅವರು ಬದಲಾವಣೆ, ಮಾಲಾ ರಾಮಚಂದ್ರ ಅವರು ಚೈತ್ರದ ಆಗಮನ, ಜ್ಞಾನ್ನವಿ ಅವರ ಆಸೆ ವಿಜಯಲಕ್ಷ್ಮಿ ಪಂಡಿತ್ ಕವನಗಳನ್ನು ವಾಚಿಸಿದರು. ಕಥೆಗಾರರಾದ ವಿಜಯಾ ಶ್ರೀಧರ ವೃದ್ಧಾಶ್ರಮ ಕಥೆ, ಆರ್. ರತ್ನಯ್ಯ ಅವರ ಸ್ಪರ್ಷಾ ಕಥೆಯನ್ನು ಕೆ. ಎಸ್. ಮಂಜಪ್ಪ ಹೇಳಿದರು. ಝೇಂಕಾರ ಸಿಂಗರ್ಸ್ ತಂಡದ ಬಸವರಾಜ್ ಮತ್ತು ತಂಡದವರು ಕನ್ನಡದ ಗೀತೆಗಳನ್ನು ಹಾಡಿದರು. ಡಿ. ಗಣೇಶ್ ಹನಿಗವನ ವಾಚಿಸಿದರು. ವೇದಿಕೆಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿಗಳಾದ ಓಂಪ್ರಕಾಶ್, ಆರ್. ರತ್ನಯ್ಯ, ಶಾಂತಾ ಆನಂದ್ ಅವರು ಉಪಸ್ಥಿತರಿದ್ದರು. ಕೆ. ಎಸ್. ಮಂಜಪ್ಪ ನಿರೂಪಿಸಿ, ಭೈರಾಪುರ ಶಿವಪ್ಪಗೌಡರು ವಂದಿಸಿದರು.