
ಜೂ 14 ರಿಂದ 3 ದಿನಗಳು ದೇವನಗರಿ ವೈಭವ
ಹೊನ್ನಾಳಿ: ಜೂನ್ 14ರಿಂದ ಮೂರು ದಿನಗಳು ದೇವನಗರಿ ವೈಭವ ಎಂಬುದಾಗಿ ಶಿರಮಗೊಂಡನಹಳ್ಳಿಯಲ್ಲಿ ಶಾಮಿಯಾನ ಡೆಕೋರೇಷನ್ ಸಂಘವು ಐದನೇ ರಾಜ್ಯಮಟ್ಟದ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ. ಇದನ್ನು ಎಲ್ಲಾ ಸದಸ್ಯರ ಸಹಕಾರದಿಂದ ಯಶಸ್ವಿಗೊಳಿಸೋಣ ಎಂಬುದಾಗಿ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಆರ್. ಲಕ್ಷ್ಮಣ್ ಹೇಳಿದರು.

ಅವರು ಗುರುಭವನದಲ್ಲಿ ನಡೆದ ತಾಲೂಕು ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಜಿಲ್ಲಾಧ್ಯಕ್ಷ ಬಿ. ಎಚ್. ಆಂಜನೇಯ ಮಾತನಾಡಿ ಎಲ್ಲಾ ಶುಭ ಕಾರ್ಯಕ್ಕೆ ಪೂಜೆ ಮಾಡಿ ಆರಂಭಿಸಿದರೆ, ನಮ್ಮ ಸಂಘವು ಡೆಕೋರೇಷನ್ ಅನ್ನು ಪೂಜೆಗಿಂತ ಮೊದಲೇ ಸಿದ್ಧಪಡಿಸುವ ಜವಾಬ್ದಾರಿಯಾಗಿದೆ. ಇಂದಿನ ಸಭೆಗೆ ೧೦೦ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದು ನ್ಯಾಮತಿ ತಾಲೂಕು ಒಳಗೊಂಡಂತೆ ಮುಂದಿನ ಸಭೆಯಲ್ಲಿ 500ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವಂತೆ ತಿಳಿಸಿ ಹರಿಹರ ಜಗಳೂರು ಚನ್ನಗಿರಿಗಳಲ್ಲಿ ತಾಲೂಕು ಮಟ್ಟದ ಸಭೆ ನಡೆಸಲಿದ್ದೇವೆ ಎಂದರು.
ರಾಜ್ಯ ಖಜಾಂಚಿ ವಿಜಯ್ ಕುಮಾರ್ ಮಾತನಾಡಿ ರಾಜ್ಯ ಸಂಘವು ಮೂರನೇ ಸಮ್ಮೇಳನ ಮೈಸೂರಿನಲ್ಲಿ ನಡೆದು ರಾಯಚೂರು ನಂತರ ನಮ್ಮ ಜಿಲ್ಲೆಯಲ್ಲಿ 5ನೇ ಅಧಿವೇಶನ ನಡೆಯಲಿದೆ. 2016ರಲ್ಲಿ ಜಿಲ್ಲೆಯಲ್ಲಿ ನಡೆದ ಸಭೆಗಿಂತ ಈ ಸಭೆಯು ಮತ್ತಷ್ಟು ಸಂಘದಲ್ಲಿ ಚೇತರಿಕೆ ಮೂಡುವಂತೆ ನಡೆಸಲು ಮುಂದಾಗಬೇಕಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್ ವೀರೇಶ್ ಮಾತನಾಡಿ ಸಂಘದ ಸದಸ್ಯರು ಅನಗತ್ಯ ಸ್ಪರ್ಧೆಗಿಂತ ಲಾಭಗಳಿಸುವಲ್ಲಿ ಮುಂದಾಗುವಂತೆ ಕರೆ ನೀಡಿದರು.
ಹೊನ್ನಾಳಿ ಗುರುದತ್ ಮಾತನಾಡಿ ತಾಲೂಕಿನಲ್ಲಿ ಎರಡು ಬಾರಿ ಸಂಘದ ಸಂಘಟನೆ ಸಾಧ್ಯವಾಗದೆ, ಈ ಬಾರಿ ಪೂರ್ಣಪ್ರಮಾಣದ ಸಂಘಟನೆಗೊಂಡಿದ್ದು. ಶಾಮಿಯಾನ ಮಾಲೀಕರು ಕಾರ್ಮಿಕರ ಹಿತವನ್ನು ಕಾಪಾಡುವ ಜವಾಬ್ದಾರಿ ಇದೆ. ಸಂಘದಿಂದ ನಮಗೆ – ನಮ್ಮಿಂದ ಸಂಘಕ್ಕೆ ಬಲ ಹಾಗೂ ಗೌರವತರುವಂತೆ ನಡೆದುಕೊಳ್ಳಬೇಕಿದೆ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮಾಜಿ ಸಚಿವ ರೇಣುಕಾಚಾರ್ಯ, ಶಿಕಾರಿಪುರ ಅಧ್ಯಕ್ಷ ಅಶೋಕ್, ನ್ಯಾಮತಿ ಅಧ್ಯಕ್ಷ ಸಡ್ಕಪ್ಪ, ತಾಲೂಕು ಅಧ್ಯಕ್ಷ ಎಸ್.ಕೆ ಪ್ರಭು ಮಾತನಾಡಿದರು.

ಸಂಘದ ತಾಲೂಕು ಉಸ್ತುವಾರಿ ನಾಗಪ್ಪ ಹೊನ್ನಾಳಿ, ಗೌರವಾಧ್ಯಕ್ಷ ವಿಶ್ವನಾಥ್ , ಉಪಾಧ್ಯಕ್ಷ ಮಂಜಪ್ಪ, ಕಾರ್ಯದರ್ಶಿ ಸುರೇಶ ನಾಯ್ಕ, ಖಜಾಂಚಿ ಹರೀಶ್, ಸದಸ್ಯ ವಾಗೀಶ್, ಶಂಶದ್ ಆಲಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.