

ಶಿವಮೊಗ್ಗ, ಮಾ.26:
ವಿನೋಬನಗರ 100 ಅಡಿ ರಸ್ತೆ ಆಲ್ಕೊಳ ಮಾರ್ಗದಲ್ಲಿ ಇರುವಂತಹ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತರಕಾರಿ ಮಾರುಕಟ್ಟೆಯಲ್ಲಿ ಮಳಿಗೆಗಳು ಹೋಲ್ ಸೇಲ್ ವ್ಯಾಪಾರದ ಮೂಲಕ ನಡೆಯುತ್ತಿವೆ. ಅಂತೆಯೇ ಬಡಪಾಯಿ ರೈತರು ಮತ್ತೊಂದು ಬದಿಯಲ್ಲಿ ತಾವು ಬೆಳೆದ ಬೆಳೆಯನ್ನು ಮಾರಲು ಕುಳಿತಿರುವುದು ನಿತ್ಯ ನಿರಂತರದ ಸಂಗತಿಯೇ ಹೌದು.

ಆದರೆ ಕಳೆದ ಮೂರು ದಿನಗಳಿಂದ ಈ ಎಪಿಎಂಸಿ ಅಧಿಕಾರಿಗಳು ಈ ಬಡಪಾಯಿ ರೈತರ, ಚಿಲ್ಲರೆ ಪುಟ್ಟ ವ್ಯಾಪಾರ ಮಾಡುವ ಅಮಾಯಕರ ಮೇಲೆ ದಬ್ಬಾಳಿಕೆ ಮಾಡುತ್ತಾ ನೀವು ಆ ಕಡೆ ಹೋಗಿ ಈ ಕಡೆ ಹೋಗಿ ಎಂದು ನಿತ್ಯ ಒಂದೊಂದು ಕಡೆ ತೋರಿಸುತ್ತಾ ಸಾಕಷ್ಟು ಕಿರಿಕಿರಿ ಮಾಡುವ ಮತ್ತು ಬಾಗಿಲು ಹಾಕುವ ಬೆದರಿಕೆ ಮಾತನಾಡುವ ಘಟನೆ ನಿರಂತರವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇಲ್ಲಿ ಅಸಹಾಯಕರು ಕಂಗಾಲಾಗಿದ್ದಾರೆ. ಬೆಳಗ್ಗೆ ಸುಮಾರು ನಾಲ್ಕರ ಹೊತ್ತಿಗೆ ಬರುವ ಈ ಚಿಲ್ಲರೆ ವ್ಯಾಪಾರಿಗಳು ಅದರಲ್ಲೂ ಹೆಚ್ಚಾಗಿ ರೈತರು ತಾವು ಬೆಳೆದ ತರಕಾರಿಯನ್ನು ಹೊತ್ತು ಆದಷ್ಟು ಬೇಗನೆ ವ್ಯಾಪಾರವಾಗಲಿ ಎಂದು ನಿರಂತರವಾಗಿ ಕುಳಿತುಕೊಳ್ಳುತ್ತಿದ್ದ ಸ್ಥಳದಲ್ಲಿ ಕುಳಿತುಕೊಂಡಿದ್ದರೂ ಸಹ ಎಪಿಎಂಸಿಯ ಮಾರುಕಟ್ಟೆ ಅಧಿಕಾರಿ ಶಾಮ್ಯಾ ನಾಯ್ಕ್ ಹಾಗೂ ಇತರರು, ಸಿಬ್ಬಂದಿಗಳು ಅವರನ್ನು ಎತ್ತಂಗಡಿ ಮಾಡಿಸಲು ಪ್ರಯತ್ನಿಸುತ್ತಿರುವುದು ಈಗ ಇಲ್ಲಿನ ವ್ಯಾಪಾರಿಗಳಿಗೆ ಹಾಗೂ ವಿಶೇಷವಾಗಿ ರೈತರಿಗೆ ನೋವಿನ ಸಂಗತಿಯಾಗಿದೆ.

ಏಕಾಏಕಿ ಈ ನಿರ್ಧಾರವನ್ನು ಏಕೆ ತೆಗೆದುಕೊಂಡರೂ ಗೊತ್ತಿಲ್ಲ. ಆದರೆ ಇಲ್ಲಿ ಅಂಗಡಿ ಇಟ್ಟುಕೊಂಡಿರುವ ಬಹುತೇಕ ಹೋಲ್ ಸೇಲ್ ವ್ಯಾಪಾರಸ್ಥರು, ಚಿಲ್ಲರೆ ಮಾರಾಟ ಮಾಡಿದರೂ ಸಮಸ್ಯೆ ಇಲ್ಲ. ಫುಟ್ಬಾತ್ ನಲ್ಲಿ ಇಟ್ಟುಕೊಂಡರೂ ಸಮಸ್ಯೆ ಇಲ್ಲ. ಆದರೆ ಇಲ್ಲಿ ಅಸಹಾಯಕರು, ಅಮಾಯಕರು, ಬಡಪಾಯಿಗಳ ಮೇಲೆ ದಬ್ಬಾಳಿಕೆ ಮಾಡುವುದರ ಹಿಂದಿನ ಕಥೆ ಅರ್ಥವಾಗುವುದು ಅನಿವಾರ್ಯವಾಗಿದೆ.
