
ಶಿವಮೊಗ್ಗ,ಮಾ.೨೫: ಕೆರೆ ಒತ್ತುವರಿ ಭೂಗಳ್ಳರನ್ನು ಜೈಲಿಗೆ ಕಳುಹಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಕೆರೆಗಳು ಬತ್ತಿ ಹೋಗುತ್ತಿದೆ. ಇದರ ನಡುವೆ ಕೆರೆಗಳ ಒತ್ತುವರಿ ಜಲಮೂಲಗಳಿಗೆ ಕಂಟಕವಾಗಿವೆ. ಒಟ್ಟು ೧೧೬೫೨ ಕೆರೆಗಳ ಪೈಕೆ ೩೭೨೮೨ ಎಕರೆ ಪ್ರದೇಶ ಒತ್ತುವರಿಯಾಗಿದೆ. ಆದರೆ ಇದರಲ್ಲಿ ಕೇವಲ ೨೩೯೮೩ ಎಕರೆ ಭೂಮಿಯನ್ನು ಮರುವಶಕ್ಕೆ ಪಡೆಯಲಾಗಿದೆ. ಇನ್ನೂ೧೩೨೯೮ ಎಕರೆ ಭೂ ಪ್ರದೇಶ ಭೂಗಳ್ಳರ ವಶದಲ್ಲಿದೆ ಎಂದು ಮನವಿದಾರರು ತಿಳಿಸಿದರು.

ಅನೇಕ ಕಡೆ ಕೆರೆ ಒತ್ತುವರಿಗೆ ಭೂಮಿಯನ್ನು ವಶಕ್ಕೆ ಪಡೆದಿದ್ದರೂ ಕೂಡ ಕೆಲವು ಭೂಗಳ್ಳರು ಸ್ಥಳೀಯ ಕಂದಾಯಾಧಿಕಾರಿಗಳ ಜೊತೆ ಶಾಮಿಲಾಗಿ ಪುನಃ ಒತ್ತುವರಿಗೆ ಜಮೀನನ್ನೇ ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಇನ್ನು ೧೦೭೫೪ ಕೆರೆಗಳ ಒತ್ತುವರಿಯ ಬಗ್ಗೆ ಸರ್ವೇ ಕಾರ್ಯ ಬಾಕಿ ಉಳಿದಿದೆ. ಇದುವರೆಗೂ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಭೂಗಳ್ಳರಿಗೆ ಕಠಿಣ ಶಿಕ್ಷೆ ವಿಧಿಸುವ ಮತ್ತು ಕೆರೆಗಳ ಒತ್ತುವರಿ ತೆರವುಗೊಳಿಸಲು ಅನುಕೂಲವಾಗುವಂತೆ ಸುಗ್ರೀವಾಜ್ಞೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಶಂಕರನಾಯ್ಕ, ಹೆಚ್.ಎಂ.ಸಂಗಯ್ಯ, ಎಸ್.ಪಿ.ಶಿವಣ್ಣ, ಆದಿಶೇಷ, ಜನಮೇಜಿರಾವ್, ಪ್ರೊ.ಕಲ್ಲನ, ಗೋಪಾಲಕೃಷ್ಣ, ಷಣ್ಮುಖಪ್ಪ ಸೇರಿದಂತೆ ಹಲವರಿದ್ದರು.