
ಶಿವಮೊಗ್ಗ : ಸುಗಮ ಆಡಳಿತದ ಹಿತಾದೃಷ್ಟಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ೩೫ ವಾರ್ಡ್ಗಳಿಗೆ ೩ ವಲಯಗಳನ್ನು ಸೃಷ್ಟಿಸಿ ಪಾಲಿಕೆ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಸಾಕಷ್ಟು ನೂನ್ಯತೆಗಳಿದ್ದು, ತಕ್ಷಣವೇ ಅದನ್ನು ಮರು ಪರಿಶೀಲಿಸಿ ಎಲ್ಲಾ ವಾರ್ಡ್ ಗಳ ಜನರಿಗೂ ಅನುಕೂಲವಾಗುವಂತೆ ವಲಯಗಳನ್ನು ಗುರುತಿಸಬೇಕೆಂದು ಜಿಲ್ಲಾ ಜೆಡಿಎಸ್ ಮುಖಂಡರ ನಿಯೋಗ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಮಾಜಿ ಶಾಸಕ ಹಾಗೂ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಉಪಾಧ್ಯಕ್ಷ ಕೆ. ಬಿ.ಪ್ರಸನ್ನ ಕುಮಾರ್ ಮತ್ತು ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ನೇತೃತ್ವದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಜೆಡಿಎಸ್ ಮುಖಂಡರು, ಪಾಲಿಕೆ ಆಯುಕ್ತರು ಸೃಷ್ಟಿಸಿರುವ ವಲಯಗಳ ಆದೇಶ ಅತ್ಯಂತ ಅವೈಜ್ಞಾನಿಕವಾಗಿದೆ. ಇದರಿಂದ ನಗರದ ನಾಗರೀಕರಿಗೆ ಅನುಕೂಲವಾಗುವ ಬದಲಿಗೆ ಅನಾನುಕೂಲಗಳೇ ಹೆಚ್ಚಿವೆ ಎಂದು ಮನವಿ ಮಾಡಿಕೊಟ್ಟಿತ್ತಲ್ಲದೆ, ಈ ಆದೇಶವನ್ನು ಮರುಪರಿಶೀಲಿಸುವಂತೆ ಆಯುಕ್ತರಿಗೆ ಸೂಚಿಸಲು ಮನವಿ ಮಾಡಿತು.

ಆಯುಕ್ತರ ಆದೇಶದನ್ವಯ ಹೊಸ ವಲಯ ೧ ರ ಕಚೇರಿ ನಗರದ ವಿನೋಬನಗರ ಪೊಲೀಸ್ ಚೌಕಿ ಬಳಿ ಇದ್ದು, ಹೊರಡಿಸಲಾಗಿರುವ ಹೊಸ ಆದೇಶದಂತೆ ಇದರ ವ್ಯಾಪ್ತಿಗೆ ವಾರ್ಡ್ ನಂ. ೧. ೨, ೩, ೪, ೬, ೭, ೮, ೯, ೩೨, ೩೩, ೩೪ ಬರಲಿವೆ. ಸದರಿ ವಾರ್ಡುಗಳ ಪೈಕಿ ೩೨, ೩೩, ಹಾಗೂ ೩೪ ಕ್ರಮವಾಗಿ ಟಿಪ್ಪು ನಗರ, ಸವಾಯಿ ಪಾಳ್ಯ ಹಾಗೂ ವಿದ್ಯಾನಗರ ದಕ್ಷಿಣ ಆಗಿದ್ದು, ಇವು ತುಂಗಾ ನದಿ ದಡದಲ್ಲಿರುವ ಪ್ರದೇಶಗಳಾಗಿವೆ. ವಲಯ ೧ರ ಕಚೇರಿ ವಿನೋಬನಗರದಿಂದ ಸುಮಾರು ೫-೬ ಕಿ. ಮೀ. ದೂರದಲ್ಲಿವೆ. ಅಲ್ಲಿಂದ ಜನರು ಬರುವುದಕ್ಕೆ ತೀವ್ರ ತೊಂದರೆ ಆಗಲಿದೆ ಎಂದು ಜೆಡಿಎಸ್ ಮುಖಂಡರು ದೂರಿದರು.

ವಲಯ ೩ ರ ವ್ಯಾಪ್ತಿಗೆ ಬರುವಂತಹ ವಾರ್ಡ್ ೧೨, ೧೩, ೧೪, ೧೫, ೧೬, ೧೭, ೧೮, ೧೯, ೨೩, ೨೪, ೨೫, ೨೭, ಹಾಗೂ ೨೮ ರ ಪೈಕಿ ೧೮ ಮತ್ತು ೧೯ ಕ್ರಮವಾಗಿ ವಿನೋಬನಗರ ದಕ್ಷಿಣ ಹಾಗೂ ಶರಾವತಿ ನಗರ ಆಗಿರುತ್ತದೆ. ವಲಯ ೦೩ ರ ಕಛೇರಿ ಇರುವ ಪ್ರದೇಶಕ್ಕೂ ವಿನೋಬನಗರ ವಾರ್ಡ್ ೧೮ ಹಾಗೂ ಶರಾವತಿ ನಗರ ವಾರ್ಡ್ ೧೯ಕ್ಕೂ ಸುಮಾರು ೫-೬ ಕಿ.ಮಿ ದೂರವಿರುತ್ತದೆ. ಹಾಗೆಯೇ ವಲಯ ೩ ರ ಕಛೇರಿ ವ್ಯಾಪ್ತಿಗೆ ಬರುವ ವಾರ್ಡ್ ೩೨ ಟಿಪ್ಪು ನಗರ, ವಾರ್ಡ್ ೩೩ ಸವಾಯಿ ಪಾಳ್ಯ ಹಾಗೂ ವಾರ್ಡ್ ೩೪ ವಿದ್ಯಾನಗರ ದಕ್ಷಿಣ ಪ್ರದೇಶಗಳನ್ನು ವಲಯ ೦೧ಕ್ಕೆ ಅದ್ಯಾವ ತಾಂತ್ರಿಕ ಕಾರಣಗಳಿಂದಾಗಿ ಸೇರಿಸಲಾಗಿದೆಯೋ ಗೊತ್ತಿಲ್ಲ. ಆದರೆ ಇದರಿಂದ ನಗರದ ನಾಗರಿಕರಿಗೆ ತೊಂದರೆ ಆಗುತ್ತಿದೆ. ತಕ್ಷಣವೇ ಸರಿಪಡಿಸುವಂತೆ ತಾವು ಆಯುಕ್ತರಿಗೆ ಸೂಚಿಸಬೇಕೆಂದು ಜೆಡಿಎಸ್ ಮುಖಂಡರು ಮನವಿ ಮಾಡಿದರು.

ಇದೆ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಮುಖಂಡರಾದ ಉಮಾಶಂಕರ್ ಉಪಾಧ್ಯ, ಕೃಷ್ಣ, ವೆಂಕಟೇಶ್, ವಿಜಯ್ ಕುಮಾರ್, ನಗರ ಯುವ ಜೆಡಿಎಸ್ ಅಧ್ಯಕ್ಷ ಸಂಜಯ್ ಕಶ್ಯಪ್, ದಯಾನಂದ್ ಸಾಲಾಗಿ, ಮಾಧವ ಮೂರ್ತಿ, ಸಿದ್ದೇಶ್, ಗೋವಿಂದ ರಾಜ್, ಗೋಪಿ ಮೊದಲಿಯರ್, ನಿಹಾಲ್ ಖಾನ್, ನೀಲು, ರುದ್ರೇಶ್, ಮೂರ್ತಿ, ಪ್ರಪುಲ, ಚಂದ್ರಶೇಖರ್, ಚನ್ನು, ಬಸಪ್ಪ, ಪುಷ್ಪ, ಲಕ್ಷ್ಮಿ, ಸರಿತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.