
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಬೆಳೆದಂತೆ ಅದನ್ನು ದುರುಪಯೋಗಪಡಿಸಿಕೊಳ್ಳುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಸಂದೇಶವನ್ನು ಕಳಿಸುವುದು, ಲಾಟರಿ, ಗಿಫ್ಟ್ ಅಥವಾ ಉಚಿತ ಬಹುಮಾನಗಳ ಆಸೆ ಹುಟ್ಟಿಸಿ ಗ್ರಾಹಕರಿಂದ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಮುಂತಾದ ಮಾಹಿತಿಗಳನ್ನು ಪಡೆದು ಓಟಿಪಿಯನ್ನು ಪಡೆದು ಮೋಸ ಮಾಡುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ವ್ಯಕ್ತಿಗಳನ್ನು ಹೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದು ಸುಳ್ಳು ಹೇಳಿ ಅವರಿಂದ ಹಣಕ್ಕಾಗಿ ಬೇಡಿಕೆ ಇಡುವ ಪ್ರಕರಣಗಳೂ ಕೂಡ ಹೆಚ್ಚುತ್ತಿವೆ. ಆದ್ದರಿಂದ ಜಾಲತಾಣಗಳನ್ನು ಬಳಸುವಾಗ ಎಚ್ಚರದಿಂದ ಇರಬೇಕು

. ಹಾಗೆಯೇ ಮೊಬೈಲ್ ಹ್ಯಾಕರ್ ಪ್ರಕರಣಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ ಆದ್ದರಿಂದ ಈ ರೀತಿಯ ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿಗಳು ಜಾಗರೂಕರಾಗುವುದಲ್ಲದೆ ಬೇರೆಯವರಿಗೆ ಅರಿವನ್ನು ಮೂಡಿಸಬೇಕು ಅಲ್ಲದೆ ಮೊಬೈಲ್ಗಳ ದಾಸರಾಗದೆ ಹೆಚ್ಚಿನ ಜ್ಞಾನಸಂಪಾದನೆ ಮಾಡಬೇಕು ಅಲ್ಲದೆ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೆ ತಮ್ಮ ಭವಿಷ್ಯವನ್ನು

ಉಜ್ವಲಗೊಳಿಸಿಕೊಳ್ಳಬೇಕು ಎಂದು ಕುಂಸಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆದ ಶ್ರೀ ದೀಪಕ್ ಎಂ ಎಸ್ ಅವರು ನಗರದ ಪಿಇಎಸ್ ಐಎಎಮ್ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹೊರಬೈಲು ಗ್ರಾಮದಲ್ಲಿ ಆಯೋಜಿಸಿದ ವಾರ್ಷಿಕ ವಿಶೇಷ ಶಿಬಿರದಲ್ಲಿ ಅಪರಾಧ ನಿಯಂತ್ರಿಸುವಲ್ಲಿ ಯುವಜನತೆಯ ಹೊಣೆಗಾರಿಕೆ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡುತ್ತಾ ಸಭೆಯನ್ನು ಉದ್ದೇಶಿಸಿ ನುಡಿದರು.

ಸಮಾರಂಭದಲ್ಲಿ ಹೊರಬೈಲು ಗ್ರಾಮದ ಮುಖಂಡರಾದ ಶ್ರೀ ಉಮೇಶ್ ಕೆ. ಜಿ ಆರ್, ತುಪ್ಪೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್, ಶನೈಶ್ಚರ ದೇವಸ್ಥಾನದ ಅರ್ಚಕರಾದ ಶ್ರೀ ನಾಗೇಶಪ್ಪ, ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಾನಸ ಭಟ್, ಧರ್ಮಸ್ಥಳ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಕುಮಾರ್, ಶಿಬಿರಾಧಿಕಾರಿಗಳಾದ ಶ್ರೀಮತಿ ಭವ್ಯ ವಿ, ಕನ್ನಡ ಅವರುಗಳು

ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶ್ರೀ ರವಿಕುಮಾರ್ ಕೆ ಎಂ, ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀ ಅಭಿಷೇಕ್, ಕು. ದೀಪಶ್ರೀ ಹಾಗೂ ಹೊರಬೈಲು ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳು ಹಾಜರಿದ್ದರು. ರಾಸೇಯೋ ಶಿಬಿರಾರ್ಥಿಗಳಾದ ಕು. ವರ್ಷಿತ ಇವರು ವಂದಿಸಿದರು, ಕು. ರಾಧಿಕಾ ನಿರೂಪಿಸಿದರು.