ಶಿವಮೊಗ್ಗ: ಭದ್ರಾವತಿ ಗಲಾಟೆ ಸಂಬಂಧ ಬಂಧನದ ಭೀತಿ ಎದುರಿಸುತ್ತಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ನಿರೀಜ್ಷಣಾ ಜಾಮೀನು ದೊರೆತಿದೆ.
ಕಳೆದ ಫೆ.27 ಮತ್ತು 28 ರಂದು ಭದ್ರಾವತಿಯ ಕನಕ ಮಂಟಪದಲ್ಲಿ ಕಬಡ್ಡಿ ಪಂದ್ಯಾವಳಿ ಫೈನಲ್ ಪಂದ್ಯದ ಬಳಿಕ ನಡೆದ ಗಲಭೆ ಪ್ರಕರಣದಲ್ಲಿ ಶಾಸಕ ಸಂಗಮೇಶ್ವರ್ ಪುತ್ರ ಗಣೇಶ್ ಹಾಗೂ ಸಹೋದರ ಬಿ.ಕೆ ಮೋಹನ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು.
ಹೀಗಾಗಿ ಬಂಧನ ಭೀತಿ ಎದುರಿಸಿದ್ದ ಈ ಮೂವರಿಗೆ ಶಿವಮೊಗ್ಗ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಈ ಮೂವರೂ ಕಳೆದ ವಾರವೇ ನಿರೀಕ್ಷಣಾ ಜಾಮೀನು ಕೋರಿ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ನಿನ್ನೆ ನ್ಯಾಯಾಧೀಶರಾದ ಸೋಮಪ್ಪನವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
ಬಿಜೆಪಿಯ ಧರ್ಮಪ್ರಸಾದ್ ಮತ್ತು ಮಂಗೋಟೆ ರುದ್ರೇಶ್ ರವರ ವಿರುದ್ಧವೂ ಜಾತಿ ನಿಂದನೆಯ ತಕರಾರು ಅರ್ಜಿ ವಿಚಾರಣೆಯು ಸೋಮವಾರ ನಡೆಯಲಿದೆ.