
ಸಾಗರ : ಇಲ್ಲಿನ ಜೆ.ಪಿ.ನಗರದಲ್ಲಿ ಸಣ್ಣಪುಟ್ಟ ವಿಷಯಕ್ಕೆ ಮೂವರ ನಡುವೆ ಜಗಳ ನಡೆದು ತಮಿಳುನಾಡು ಮೂಲದ ರಾಜು (೪೮) ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಜೆ.ಪಿ.ನಗರದಲ್ಲಿ ಕಾಮದಹನ ಸಂದರ್ಭದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ರಾಜು ಎಂಬುವವರು ಅದೇ ಏರಿಯಾದ ಮಧು ಮತ್ತು ಮಾಲತೇಶ್ ಬ್ಯಾಡಗಿ ಅವರಿಗೆ ತಮಾಷೆ ಮಾಡಿದ್ದಾರೆ. ಮಾಲತೇಶ್ ಮತ್ತು ಮಧು ಇರುವ ಕಡೆ ರಾಜು ಬಂದು ಕುಣಿಯುವುದು, ಚೇಡಿಸುವುದನ್ನು ಮಾಡಿದ್ದಾರೆ. ಇದರಿಂದ ಮಧು ಮತ್ತು ಮಾಲತೇಶ್ ಆಕ್ರೋಶಕ್ಕೆ ಒಳಗಾಗಿದ್ದರು.

ರಾತ್ರಿ ೧ಗಂಟೆ ಸುಮಾರಿಗೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಮೂವರ ನಡುವೆ ಜಗಳ ನಡೆದಿದ್ದು ಮಧು ಮತ್ತು ಮಾಲತೇಶ್ ಆಕ್ರೋಶದಿಂದ ರಾಜು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗಾಯಗೊಂಡಿದ್ದ ರಾಜು ಅವರನ್ನು ಸ್ಥಳೀಯರು ಮನೆಗೆ ಬಿಟ್ಟು ಬಂದಿದ್ದರು. ಮಾರನೇ ದಿನ ರಾಜು ಗಂಭೀರವಾಗಿ ಗಾಯಗೊಂಡಿರುವುದನ್ನು ಗಮನಿಸಿ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ರಾಜು ಅವರು ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧು ಮತ್ತು ಮಾಲತೇಶ್ ಅವರನ್ನು ವಶಕ್ಕೆ ಪಡೆಯಲಾಗಿದೆ.