ಶಿವಮೊಗ್ಗ,ಮಾ.೦೮: ಈ ಬಜೆಟ್ನಲ್ಲಿ ಬಹಳಷ್ಟು ಪ್ರಶ್ನೆಗಳಿದ್ದವು ಎಲ್ಲದಕ್ಕೂ ಮುಖ್ಯಮಂತ್ರಿಗಳು ತಮ್ಮ ಅನುಭವದ ೧೬ನೇ ಬಾರಿಯ ಸಮಾನತೆಯ ಬಜೆಟ್ ಮಂಡಿಸಿ ನ್ಯಾಯ ಒದಗಿಸಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್.ಮಧುಬಂಗಾರಪ್ಪ ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಗೆ ಹೆಚ್ಚಿನ ಒತ್ತು ನೀಡಿ ೪೫ ಸಾವಿರ ಕೋಟಿ ನೀಡಿದ್ದಾರೆ. ಹೋದ ಬಾರಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗಿತ್ತು. ಈ ಬಾರಿ ಕಲಿಕೆಗೆ ಒತ್ತು ನೀಡಿದ್ದಾರೆ ಎಂದರು.
ಈ ಬಾರಿ ಪರೀಕ್ಷೆಯಲ್ಲಿ ಬಿಗಿಕ್ರಮ ಕೈಗೊಂಡಿದ್ದೆವು. ಗ್ರೇಸ್ ಮಾರ್ಕ್ ಕೂಡ ಇನ್ನೂ ಮುಂದೆ ಇರುವುದಿಲ್ಲ. ಆದರೆ ಎಲ್ಲ ಶಾಲೆಗಳಿಗೆ ಟಾರ್ಗೆಟ್ ಕೊಟ್ಟಿದ್ದೇವೆ. ಗಣಿತ-ಗಣಕ, ಇಂಗ್ಲಿಷ್ ಕನ್ನಡ ಟೀಚರ್ಲೆಸ್ ಶಿಕ್ಷಣ ಸ್ಕಿಲ್ ಯೆಟ್ ಸ್ಕೂಲ್, ಭಾಷಾ ಪರಿಣಿತಿ, ಓದು ಕರ್ನಾಟಕ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಓದುವ ಪರಿಜ್ಞಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಲಿಕೆಯಲ್ಲಿ ಸುಧಾರಣೆ ತರಲು ಅನೇಕ ಹೊಸ ಕ್ರಮ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ೫೬೦೦ ಬೇರೆ ಕಡೆ ೫ ಸಾವಿರ ಒಟ್ಟಾರೆಯಾಗಿ ೧೮ ಸಾವಿರ ಶಿಕ್ಷಕರ ನೇಮಕಾತಿ ಆಗಲಿದೆ. ಅತಿಥಿ ಉಪನ್ಯಾಸಕರ ಸಂಬಳ ೨ ಸಾವಿರ ಹೆಚ್ಚಳವಾಗಿದೆ. ಬಿಸಿಯೂಟ ಕಾರ್ಮಿಕರಿಗೆ ೧ ಸಾವಿರ ಹೆಚ್ಚಿಸಲಾಗಿದೆ. ೪ಸಾವಿರ ಕ್ಲಾಸ್ ರೂಮ್ಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ೧೦೦ ಕೋಟಿಯನ್ನು ಪೀಠೋಪಕರಣಗಳಿಗೆ ಹಾಗೂ ಅಡಿಗೆ ಪಾತ್ರೆಗಳ ಬದಲಾವಣೆಗೆ ನೀಡಲಾಗಿದೆ ಎಂದರು.
ಜಿಲ್ಲೆಗೆ ಸಂಬಂಧಪಟ್ಟಂಗೆ ೨೦೦ ಕೋಟಿ ವೆಚ್ಚದ ಜಿಲ್ಲಾಡಳಿತ ಭವನಕ್ಕೆ ೭೫ ಕೋಟಿ ಅನುದಾನ ಬರಲಿದ್ದು, ಎರಡೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಕ್ಯಾನ್ಸರ್ ಆಸ್ಪತ್ರೆ ವಿವಾದವನ್ನು ಸರಿಪಡಿಸಲಾಗುವುದು. ಗ್ರಾಮೀಣ ಭಾಗಗಳಲ್ಲಿ ನೀರಾವರಿಗೆ ಅನುದಾನ ನೀಡಲಾಗಿದೆ. ಸೊರಬ , ಶಿರಾಳಕೊಪ್ಪ, ಆನವಟ್ಟಿಗೆ ಶರಾವತಿಯಿಂದ ೧೬೦ ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಹಾಕಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಎಲೆಚುಕ್ಕಿ ರೋಗಕ್ಕೆ ೬೨ ಕೋಟಿ ಕೆಎಫ್ಡಿಗೆ ೫೦ ಕೋಟಿ, ಭೂ ಕುಸಿತ ತಡೆಗೆ ಅನುದಾನ ಸಣ್ಣ ಮತ್ತು ದೊಡ್ಡ ನೀರಾವರಿಗೆ ವಿಶೇಷ ಅನುದಾನ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ೨೩೦ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತದೆ ಎಂದರು.
ಬಿಜೆಪಿ ನಮ್ಮ ದೇಶಕ್ಕೆ ಶಾಪ, ನಾವು ಯಾವತ್ತು ಜಾತಿ ಧರ್ಮ ಮಾಡುವುದಿಲ್ಲ. ಗೋಮಾತೆಯ ಹೆಸರೇಳಿ ಗೋವನ್ನು ಹರಾಜು ಹಾಕುವವರೇ ಬಿಜೆಪಿಯವರು. ಬಡವರ ಕೈಗೆ ದುಡ್ಡುಕೊಟ್ಟಿದ್ದಾರೆ ಅದು ಮತ್ತೆ ಮಾರುಕಟ್ಟೆಗೆ ಬರುವುದರಿಂದ ರಾಜ್ಯದ ಜೆಡಿಪಿಯಲ್ಲಿ ಹೆಚ್ಚಳವಾಗಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯದಲ್ಲಿ ಕರ್ನಾಟಕ ೨ನೇ ಸ್ಥಾನದಲ್ಲಿದೆ. ದಲಿತರ ಹಣವನ್ನು ಕೂಡ ಅವರ ಉಪಯೋಗಕ್ಕೆ ನೀಡಲಾಗಿದೆ. ಇದರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಲಗೂಡು ರತ್ನಾಕರ್, ವಿಜಯ್ಕುಮಾರ್, ಜಿ.ಡಿ.ಮಂಜುನಾಥ್, ಹರ್ಷಿತ್ಗೌಡ, ವಿಜಯ್, ವಿನಯ್ ತಾಂಡ್ಲೆ, ಕುಮರೇಶ್, ಮೋಹನ್ಕುಮಾರ್, ಶಿ.ಜು.ಪಾಶಾ, ಶಿವಾನಂದ ಮತ್ತಿತರರು ಇದ್ದರು.