ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಡವರಿಗಾಗಿಯೇ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು ದೇಶದ ನಾಗರಿಕರಿಗೆ ಹೆಚ್ಚಿನ ಅನುಕೂಲಕರವಾಗಿದ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಅಡಿಯಲ್ಲಿ ೭ ವರ್ಷಗಳ ಹಿಂದೆ ಜಾರಿಗೆ ಬಂದಿರುವ ಜನೌಷಧಿ ದಿವಸ್ ಆಚರಣೆ- ೨೦೨೫ಅನ್ನು ಉದ್ಘಾಟಿಸಿ ಮಾತನಾಡಿದರು.
ಜನೌಷಧಿ ಕೇಂದ್ರದಿಂದ ಇನ್ನೂ ಹೆಚ್ಚಿನ ಬಡವರಿಗೆ ಪ್ರಯೋಜನ ತಲುಪಬೇಕು ಎಂಬುದು ಪ್ರಧಾನಿಯವರ ಮಹಾದಾಸೆಯಾಗಿದೆ. ದೇಶದಲ್ಲಿ ೧೫ ಸಾವಿರ ಜನೌಷಧಿ ಕೇಂದ್ರಗಳಿದ್ದು, ಬಡವರಿಗೆ ಮಧ್ಯಮ ವರ್ಗದವರಿಗೆ ತಿಂಗಳಿಗೆ ಸರಾಸರಿ ೩ ಸಾವಿರ ರೂ. ಗಳಷ್ಟು ಔಷಧಿಗೆ ವೆಚ್ಚವಾಗುತ್ತಿದ್ದು, ಜನೌಷಧಿ ಕೇಂದ್ರದಿಂದಾಗಿ ಅದು ಒಂದು ಸಾವಿರ ರೂ.ಗೆ ಇಳಿಕೆಯಾಗಿದೆ. ಇದರಿಂದ ಪ್ರತಿ ಕುಟುಂಬ ೨ ಸಾವಿರ ರೂ.ನಷ್ಟು ಉಳಿತಾಯ ಮಾಡಿಕೊಳ್ಳುತ್ತಿದೆ ಎಂದರು.

ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಿಗಳು ಯಾವುದೇ ತೆರಿಗೆ ಇಲ್ಲದೇ ಕೇವಲ ಉತ್ಪಾದನಾ ವೆಚ್ಚಕ್ಕಷ್ಟೇ ಮಾರಾಟವಾಗುತ್ತಿವೆ. ರಾಜ್ಯದಲ್ಲಿ ಇದನ್ನು ಇನ್ನೂ ಸರಳೀಕರಿಸಬೇಕಾಗಿದೆ. ಶಾಸಕರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆ ವೈದ್ಯರ ಜೊತೆ ಚರ್ಚಿಸಿ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧಿ ದೊರೆಯುವಂತಾಗಬೇಕು ಎಂದ ಸಂಸದರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಕುಟುಂಬ ಕಲ್ಯಾಣ ಇಲಾಖಾ ಕಚೇರಿಗಳಲ್ಲಿ ಜನೌಷಧಿ ಮಾರಾಟ ಮಾಡಲು ಸಹಕರಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧಿ ದೊರಕಿದರೆ ಬಡವರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಅಧ್ಯಕ್ಷ ಎಸ್. ದತ್ತಾತ್ರಿ, ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಜನೌಷಧಿ ಅಧಿಕಾರಿ ವೀರೇಶ್ ಬಾಬು, ಮುಖಂಡರಾದ ರಾಮುನಾಯ್ಕ್, ಮಲ್ಲೇಶ್, ಮೋಹನ್ ರೆಡ್ಡಿ, ಮಾಲತೇಶ್, ಕಿರಣ್ ಕುಮಾರ್, ಸುನಿಲ್ ಗಾಯಕ್ವಾಡ್ ಮತ್ತಿತರರು ಇದ್ದರು.