
ಶಿವಮೊಗ್ಗ: ರಾಜ್ಯ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್ ಜನವಿರೋಧಿಯಾಗಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಇಂದು ಇಲ್ಲಿನ ಶೀನಪ್ಪಶೆಟ್ಟಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು.
ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಸ್ವಾತಂತ್ರ್ಯ ಬಂದು ೭೫ ವರ್ಷಗಳಲ್ಲಿ ೫೫ ವರ್ಷ ವಿರೋಧ ಪಕ್ಷದಲ್ಲಿದ್ದು ಬಿಜೆಪಿ ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಸಿದ್ಧರಾಮಯ್ಯ ಅವರು ದಾಖಲೆಯ ೧೬ ಬಾರಿ ಬಜೆಟ್ ಮಂಡಿಸಿ ಈ ಬಾರಿ ಅತಿ ಹೆಚ್ಚು ಮೊತ್ತದ ಬಜೆಟ್ ಮಂಡಿಸಿ ದಾಖಲೆ ಮಾಡಿದರೂ ಹಿಂದೂಗಳಿಗೆ ಅದರಲ್ಲಿಯೂ ಹಿಂದುಳಿದವರಿಗೆ ಏನೂ ಪ್ರಯೋಜನವಿಲ್ಲವೆಂದು ಟೀಕಿಸಿದರು.

ಬಡಜನರ ದುಡಿಮೆಯ ಹಣ ಕಿತ್ತುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಬಡವರ ಆದಾಯವನ್ನು ಕಿತ್ತುಕೊಂಡೇ ಸರ್ಕಾರ ನಡೆಸುವ ಪ್ರಯತ್ನ ಬಜೆಟ್ ನಲ್ಲಿ ಕಾಣುತ್ತೇವೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಶುಲ್ಕ ಶೇ. ೩೦೦ರಷ್ಟು ಹೆಚ್ಚಳ. ಎಲ್ಲರ ಮನೆಗಳಿಗೆ ಡಿಜಿಟಲ್ ವಿದ್ಯುತ್ ಮೀಟರ್ ಅಳವಡಿಕೆ, ರೈತರು ಅಕ್ರಮ -ಸಕ್ರಮ ಪಂಪ್ ಸೆಟ್ ಗಳ ನೋಂದಣಿಗೆ ೨೦ ಸಾವಿರ ರೂ. ನೀಡಿದರೆ ಸಾಕಾಗಿತ್ತು. ಈಗ ಅದಕ್ಕೆ ೨- ೩ ಲಕ್ಷ ರೂ. ತೆತ್ತಬೇಕಾಗದೆ. ಹೀಗಾದರೆ ಬಜೆಟ್ ಗಾತ್ರ ೪ ಲಕ್ಷ ಕೋಟಿನೂ ಆಗುತ್ತದೆ. ೫ ಲಕ್ಷ ಕೋಟಿಯೂ ಆಗುತ್ತದೆ ಎಂದು ಲೇವಡಿ ಮಾಡಿದರು.
ಯಾವುದೇ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಬಜೆಟ್ ಗಾತ್ರ ಹೆಚ್ಚಾಗಿಲ್ಲ. ಒಂದು ಕೈಯಲ್ಲಿ ಕೊಟ್ಟ ಹಾಗೆ ಮಾಡಿ ಇನ್ನೊಂದು ಕೈಯಲ್ಲಿ ಕಸಿದುಕೊಂಡಿದ್ದೆ ಸಿದ್ಧರಾಮಯ್ಯ ಅವರ ಬಜೆಟ್ ಸಾಧನೆ ಎಂದು ಟೀಕಿಸಿದರು.

ಇಂದು ಮಹಿಳಾ ದಿನಾಚರಣೆ ಆದರೂ ಕೂಡ ಮಹಿಳೆಯರು ರಾಜ್ಯ ಬಜೆಟ್ ವಿರೋಧಿಸಿ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಕಾಂಗ್ರೆಸ್ ಮತ ಬ್ಯಾಂಕ್ ವಿರುದ್ಧ ಹೋರಾಟ ಇದಾಗಿದೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಗ್ಯಾರಂಟಿಯನ್ನೇ ಅಭಿವೃದ್ಧಿಯನ್ನಾಗಿಸುವ ಮನಸ್ಥತಿಯನ್ನು ಕಾಂಗ್ರೆಸ್ ಹೊಂದಿದೆ. ಅಭಿವೃದ್ಧಿ ಯೋಜನೆಗಳೇ ಗ್ಯಾರಂಟಿ ಆಗಬೇಕು. ಅದು ಈ ಬಜೆಟ್ ನಲ್ಲಿ ಕಂಡಿಲ್ಲ. ಇದೊಂದು ಹಿಂದುತ್ವ ವಿರೋಧಿ ಬಜೆಟ್ ಆಗಿದ್ದು, ಹಲಾಲ್ ಬಜೆಟ್ ತರುವುದರ ಮೂಲಕ ಹಲ್ಕಟ್ ಬಜೆಟ್ ಮಂಡನೆಯಾಗಿದೆ ಎಂದು ಕಟುಕಿಯಾಡಿದರು.

ಸಿಎಂ ಸಿದ್ಧರಾಮಯ್ಯ ಅವರು ಮುಸ್ಲಿಂ ಓಲೈಕೆ ಮಾಡಲು ೪೫೦೦ ಕೋಟಿ ರೂ.ಗೂ ಅಧಿಕ ಅನುದಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದ್ದಾರೆ. ಅವರಿಗೆ ರಾಜ್ಯದಲ್ಲಿ ಮುಜರಾಯಿ ಇಲಾಖೆ ಇದೇ ಎನ್ನುವುದು ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಶಿವಮೊಗ್ಗದ ಅರಕೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಈ ಹಿಂದೆ ೨ ಕೋಟಿ ರೂ. ನೀಡಲಾಗಿತ್ತು. ಅದನ್ನೂ ಸರ್ಕಾರ ವಾಪಸ್ ತೆಗೆದುಕೊಂಡಿದೆ. ಬಿಜೆಪಿ ಸರ್ಕಾರದಲ್ಲಿ ಹಿಂದೂಗಳ ದೇವಸ್ಥಾನದ ಅಭಿವೃದ್ಧಿಗೆ ೧೫ ಕೋಟಿ ರೂ. ಬಿಡುಗಡೆಯಾಗಿ ಅದರಲ್ಲಿ ೭.೫ ಕೋಟಿ ರೂ. ವೆಚ್ಚವಾಗಿದೆ. ಬಾಕಿ ಉಳಿದ ಹಣ ಕೇಳಿದರೆ ಸರ್ಕಾರದಲ್ಲಿ ಹಣವಿಲ್ಲ ಎಂಬ ಆದೇಶ ಬರುತ್ತದೆ ಎಂದು ಕಿಡಿಕಾರಿದರು.
ಬಿ.ಎಸ್. ಯಡಿಯೂರಪ್ಪ ಅವಧಿಯ ಆಡಳಿತ ಕೃಷ್ಣ ದೇವರಾಯ ಕಾಲದ ಆಡಳಿತದಂತಿತ್ತು ಎಂದ ಅವರು ಸಿದ್ಧರಾಮಯ್ಯ ಅವರ ಈ ೧೬ನೇ ಬಜೆಟ್ ಅವರ ಕೊನೆಯ ಬಜೆಟ್ ಆಗಲಿದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಮುಖಂಡರಾದ ಎಸ್. ದತ್ತಾತ್ರಿ, ಮಾಲತೇಶ್, ಶಿವರಾಜ್, ಅನಿತಾ ರವಿಶಂಕರ್, ಹರಿಕೃಷ್ಣ, ಮೋಹನ್ ರೆಡ್ಡಿ, ವಿನ್ಸೆಂಟ್ ರೋಡ್ರಿಗಸ್ ಮೊದಲಾದವರಿದ್ದರು.