

ಹೊಸ ಐಡಿಯಾ ಹುಡುಕಿದ ರೈತನ ಮಂದಹಾಸ
ಹುಡುಕಾಟದ ವರದಿ- ಗಜೇಂದ್ರ ಸ್ವಾಮಿ
ಕೆಲವರ ಕಣ್ಣುಗಳು ಅತ್ಯಂತ ಕೆಟ್ಟ ದೃಷ್ಟಿಯನ್ನು ಹೊಂದಿರುತ್ತವೆ ಎಂಬುದು ಸಹಜ ಮಾತು. ಇದು ನಮ್ಮ ನಡುವೆ ಬೆಳೆಯುವವರ ಬದುಕನ್ನೇ ಹಾಳು ಮಾಡುವ ಎಷ್ಟೋ ನಿದರ್ಶನಗಳನ್ನು ಕಾಣುತ್ತೇವೆ.
ಕಷ್ಟಪಟ್ಟು ಜೀವನದಲ್ಲಿ ಒಂದಿಷ್ಟು ಉದ್ಧಾರವಾದಾಗ ಏಕಾಏಕೀ ಆತ ಆರ್ಥಿಕವಾಗಿ, ಸಾಮಾಜಿಕವಾಗಿ ಕುಸಿದು ಬೀಳುತ್ತಾನೆ. ಬದುಕಲ್ಲಿ ಅಂದುಕೊಂಡದ್ದನ್ನು ಸಾಧಿಸಲಾಗದೆ ಒದ್ದಾಡುತ್ತಾನೆ. ಆಗ ಸಹಜವಾಗಿ ಆತನ ಮೇಲೆ ಯಾರದೋ ಕೆಟ್ಟ ಕಣ್ಣು ಬಿತ್ತು ಎಂದು ಹೇಳುವ ಮಾತು ನಮ್ಮ ನಡುವೆ ಈಗಲೂ ಕೇಳುತ್ತದೆಯಲ್ಲವೇ? ಈ ಕೆಟ್ಟ ಕಂಗಳಿಂದ ಬಚಾವಾಗಲು ದೇವರ ಮೊರೆ ಹೋಗುವ ವಾಡಿಕೆ ಈಗಲೂ ನಮ್ಮಲ್ಲಿದೆ.

ಹಾಗೆಯೇ ಬೆಳೆದ ಬೆಳೆ ಆ ಕಂಗಳಿಗೆ ಬಿದ್ದು ಅವರ ಹೊಟ್ಟೆ ಕಿಚ್ಚಿನ ಮನಸ್ಸು ಚಡಪಡಿಸಿದರೆ ಆ ಕಂಗಳ ನೋಟಕ್ಕೆ ಬೆಳೆಯೇ ಸರ್ವನಾಶವಾಗುತ್ತದೆ ಎಂಬುದನ್ನು ಸಹಜವಾಗಿ ನಾವು ಕೇಳಿದ್ದೇವೆ, ನೋಡಿದ್ದೇವೆ, ಅನುಭವಿಸಿದ್ದೇವೆ ಅಲ್ಲವೇ?
ಈ ಕಂಗಳು ನಮ್ಮ ಬೆಳೆಯ ಮೇಲೆ ಬೀಳಬಾರದು ಎಂದು ಕೆಂಪು ಅಥವಾ ಕಪ್ಪು ಬಟ್ಟೆಯನ್ನು ಕಟ್ಟುತ್ತಾರೆ. ಹರಿದು ಹೋದ ಚಪ್ಪಲಿಗಳನ್ನು ಹಾಕುತ್ತಾರೆ, ಬೆದರು ಗೊಂಬೆಗಳನ್ನು ಮಾಡಿ ನಿಲ್ಲಿಸುತ್ತಾರೆಂಬುದು ಇದು ಸಹಜ.

ಆದರೆ ಇಲ್ಲೊಬ್ಬ ರೈತ ಕಳೆದ ಮೂರು ವರ್ಷಗಳಿಂದ ತಾನು ಬೆಳೆದ ತರಕಾರಿಯನ್ನು ಉಳಿಸಿಕೊಳ್ಳಲಾಗದೆ, ಆ ಕಂಗಳಿಂದ ಬಚಾವಾಗಲು ಹೊಸ ಐಡಿಯಾ ಮಾಡಿದ್ದಾನೆ. ಸಿನಿಮಾ ನಟಿಯರ ಎರಡು ಚಿತ್ರಗಳನ್ನು ಕಣ್ಣಿಗೆ ಕಾಣುವಂತೆ ಹಾಕಿದ್ದಾನೆ. ಆ ರಸ್ತೆಯಲ್ಲಿ ಬರುವವರು ಮೊದಲು ಆ ಚಿತ್ರವನ್ನು ನೋಡಬೇಕು. ಅಬ್ಬಾ ಏನು ಈ ಬ್ಯೂಟಿಯೆನ್ನಬೇಕು. ಆಗ ಆ ಕೆಟ್ಟ ಕಣ್ಣು ಆ ಚಿತ್ರದ ಮೇಲೆ ಬೀಳುತ್ತದೆ, ಬೆಳೆ ಉಳಿಯುತ್ತದೆ ಎಂಬುದು ಆತನ ಹೊಸ ಯೋಚನೆ.

ಶಿವಮೊಗ್ಗ ನ್ಯಾಮತಿ ಮಾರ್ಗವಾಗಿ ಹೋಗುವ ಮುನ್ನ ಸಿಗುವ ಬೀರನಕೆರೆ ಬಳಿಯ ಮುಖ್ಯರಸ್ತೆಯ ಪಕ್ಕದಲ್ಲಿ ತರಕಾರಿ ಬೆಳೆಯುವ ರೈತರೊಬ್ಬರು ಈ ಹೊಸ ಪ್ರಯೋಗವನ್ನು ಮಾಡಿದ್ದಾರೆ. ಅವರ ಹೊಲದಲ್ಲಿ ಇಬ್ಬರು ಸಿನಿಮಾ ನಟಿಯರ ಅತ್ಯಂತ ಸುಂದರ ಹಾಗೂ ಯೌವ್ವನ ಭರಿತ ಚಿತ್ರಗಳನ್ನು ಹಾಕಿದ್ದಾರೆ.
ಇದಕ್ಕೆ ಕಾರಣ ಕಳೆದ ಮೂರು ವರ್ಷಗಳಿಂದ ಅಲ್ಲಿ ಇದೇ ಚಪ್ಪಲಿ ಕಟ್ಟಿ, ಬಟ್ಟೆ ಸಿಗಿಸಿ, ಬೆದರುಗೊಂಬೆ ಹಾಕಿದರೂ ಉಳಿಸಿಕೊಳ್ಳಲಾಗದ, ನಾಕಾಣೆ ದುಡಿಯಲಾಗದ ರೈತ ಈ ಬಾರಿ ಹೊಸ ಆಲೋಚನೆಯನ್ನು ಮಾಡಿದ್ದಾನೆ. ಇದು ಆತನ ಹೊಸ ಪ್ರಯತ್ನ.

ತಮಿಳು ಮೂಲದ ಹಿಂದಿ ಸೇರಿದಂತೆ ಬಹುತೇಕ ಭಾಷಾಚಿತ್ರನಟಿ ಅನುಷ್ಕಾ ಹಾಗೂ ಮೊಗದೀರ ಸಿನಿಮಾದ ಐಟಂ ಸಾಂಗ್ ನೃತ್ಯಗಾರ್ತಿ ಹಾಗೋ ಮೋಹಕ ತಾರೆ ಚಿತ್ರಗಳನ್ನು ಎರಡು ಕಡೆ ಹಾಕಲಾಗಿದ್ದು, ಶಿವಮೊಗ್ಗ ಮಾರ್ಗದಿಂದ ನ್ಯಾಮತಿ ಕಡೆ ಹೋಗುತ್ತಿರುವಾಗ ಅಥವಾ ಆ ಕಡೆಯಿಂದ ಶಿವಮೊಗ್ಗಕ್ಕೆ ಬಂದರೂ ಮೊದಲು ಕಣ್ಣಿಗೆ ರಾರಾಜಿಸುವ ಆ ಚಿತ್ರಗಳನ್ನು ಕಾಣುವಂತೆ ಹಾಕಿದ್ದಾನೆ. ಇದು ನಿಜಕ್ಕೂ ಹೊಸ ಪ್ರಯತ್ನ. ಆತನ ತರಕಾರಿ ಬೆಳೆ ಈ ಬಾರಿಯಾದರೂ ಕೆಟ್ಟ ಕಣ್ಗಳಿಗೆ ಸಿಲುಕದಿರಲಿ ಎಂಬುದೇ ನಮ್ಮ ಹಾರೈಕೆ.