
ಸಾಗರ : ನಗರ ಹಾಗೂ ಆನಂದಪುರಂ ಭಾಗಗಳಲ್ಲಿ ಅಂಗಡಿಗಳ ಶೆಟರ್ಸ್ ಎತ್ತಿ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ ಆತನಿಂದ ೫ಸಾವಿರ ರೂ. ನಗದು ಮತ್ತು ೪೯ಸಾವಿರ ರೂ. ಮೌಲ್ಯದ ಎರಡು ಟಿ.ವಿ.ಯನ್ನು ವಶಪಡಿಸಿಕೊಳ್ಳಲಾಗಿದೆ.
ಡಿ. ೧೨ರಂದು ಸಾಗರದ ಬಿ.ಎಚ್.ರಸ್ತೆಯಲ್ಲಿರುವ ಅಶೋಕ್ ಎಂಬುವವರ ಅಂಗಡಿಯ ಶೆಟರ್ಸ್ ಎತ್ತಿ ಅಂಗಡಿಯಲ್ಲಿದ್ದ ಒಂದು ಡಿ.ವಿ.ಆರ್. ಮತ್ತು ೨೦ಸಾವಿರ ರೂ. ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಅಶೋಕ್ ಅವರು ಪೇಟೆ ಠಾಣೆಗೆ ಡಿ. ೧೪ರಂದು ದೂರು ನೀಡಿದ್ದರು.
ಡಿ. ೧೪ರಂದು ಆನಂದಪುರಂನ ಅಂಗಡಿಯೊಂದರ ಶೆಟರ್ಸ್ ಒಡೆದು ೭೮ಸಾವಿರ ರೂ. ಮೌಲ್ಯದ ಟಿ.ವಿ., ಹೋಂ ಥಿಯೇಟರ್ ಹಾಗೂ ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಆನಂದಪುರಂ ಠಾಣೆಯಲ್ಲಿ ಅಂಗಡಿ ಮಾಲೀಕರು ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ಶಿವಮೊಗ್ಗ ರಾಗಿಗುಡ್ಡ ವಾಸಿ ಜಾವೀದ್ ಖಾನ್ ಯಾನೆ ಲುಕ್ಮಾನ್ ಎಂಬಾತನನ್ನು ಬಂಧಿಸಿ ೫ಸಾವಿರ ರೂ. ನಗದು, ೪೯ಸಾವಿರ ರೂ. ಮೌಲ್ಯದ ೨ ಟಿವಿ ವಶಪಡಿಸಿಕೊಳ್ಳಲಾಗಿದೆ.

ಫೆ. ೧೧ರಂದು ಪೇಟೆ ಠಾಣಾ ವ್ಯಾಪ್ತಿಯ ಬಟ್ಟೆ ಅಂಗಡಿ ಮುಂಭಾಗದಲ್ಲಿ ನಿಲ್ಲಿಸಿದ್ದ ಹಿರೋಹೊಂಡ ಬೈಕ್ ಕಳ್ಳತನ ಮಾಡಿದಕ್ಕೆ ಸಂಬಂಧಪಟ್ಟಂತೆ ಮಾಲೀಕ ಉದಯಕುಮಾರ್ ಎಂಬುವವರು ದೂರು ನೀಡಿದ್ದರು. ಪ್ರಕರಣ ಸಂಬಂಧ ಆರೋಪಿಗಳಾದ ಮೊಹಮ್ಮದ್ ಖೀಂ, ವಿನೋದ್ ಎಂಬಾತನನ್ನು ವಶಕ್ಕೆ ಪಡೆದು ಸುಮಾರು ೭೦ಸಾವಿರ ರೂ. ಮೌಲ್ಯದ ಬೈಕ್ ವಶಕ್ಕೆ ಪಡೆಯಲಾಗಿದೆ.

ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಮೇಲ್ವಿಚಾರಣೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್, ಪಿಎಸ್ಐ ಯಲ್ಲಪ್ಪ ಹಿರಗಣ್ಣನವರ್, ಸಿಬ್ಬಂದಿಗಳಾದ ಸನಾವುಲ್ಲಾ, ಫೈರೋಜ್ ಆಲಿಖಾನ್, ವಿಕಾಸ್, ವಿಶ್ವನಾಥ್, ಕೃಷ್ಣಮೂರ್ತಿ, ರವಿಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು.