
ಶಿಕಾರಿಪುರ: ತೋಟದೊಳಗೆ ಮೇಕೆಗಳ ಹಿಂಡು ನುಗ್ಗಿದ್ದ ಕಾರಣಕ್ಕೆ ಅವುಗಳನ್ನು ಮೇಯಿಸುತ್ತಿದ್ದ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.

ಪಕ್ಕದ ಚಿಕ್ಕಜೋಗಿಹಳ್ಳಿ ಗ್ರಾಮದ 50 ವರ್ಷದ ದಲಿತ ಮಹಿಳೆ ಹಲ್ಲೆಗೊಳಗಾಗಿದ್ದು, ಅವರನ್ನು ಸ್ಥಳೀಯರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಮೂರು ದಿನಗಳವರೆಗೆ ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದಾರೆ. ಪ್ರಕರಣ ಕುರಿತು ಪೊಲೀಸರು ಆರಂಭದಲ್ಲಿ ದೂರು ದಾಖಲಿಸಿಕೊಂಡಿರಲಿಲ್ಲ. ದಲಿತಪರ ಸಂಘಟನೆಗಳ ಮಧ್ಯಪ್ರವೇಶದ ನಂತರ ಫೆ. 25ರಂದು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಹತ್ತಕ್ಕೂ ಹೆಚ್ಚು ಮೇಕೆಗಳು ಈಸೂರು ಗ್ರಾಮದ ತೋಟಕ್ಕೆ ನುಗ್ಗಿ ಗಿಡಗಳ ಎಲೆಗಳನ್ನು ಮೇಯ್ದಿದ್ದವು. ಅದರಿಂದ ಕೋಪಗೊಂಡ ತೋಟದ ಮಾಲೀಕ, ಮಗ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಲು ಯತ್ನಿಸಿದ್ದ. ಆಗ ಮಹಿಳೆ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ನಂತರ ಅವರನ್ನು ಮನೆ ಹತ್ತಿರದವರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು.
‘ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ದೂರನ್ನು ಪರಿಶೀಲಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದರಿಂದ ವಿಳಂಬವಾಗಿದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.