
ಕರ್ನಾಟಕದ ತುಂಗಾ ನದಿಯ ಸ್ಥಳೀಯ ಹರಗಿ ಮೀನನ್ನು (ಹೈಪ್ಸೆಲೋಬಾರ್ಬಸ್ ಪುಲ್ಚೆಲ್ಲಸ್) ೨೦೧೧ ರಲ್ಲಿ ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟ (ಐಯುಸಿಎನ್)ವು ಕೆಂಪು ಪಟ್ಟಿಗೆ ಸೇರ್ಪಡೆ ಮಾಡಿ, ತೀವ್ರವಾಗಿ ಅಳಿವಿನಂಚಿನಲ್ಲಿರುವ ಪರ್ಯಾಯ ದ್ವೀಪ ಕಾರ್ಪ್ ಎಂದು ವರ್ಗೀಕರಿಸಿದೆ. ಇದರ ಸಂರಕ್ಷಣೆಯ ಮಹತ್ವವನ್ನು ಪರಿಗಣಿಸಿ, ಐಸಿಎಆರ್-ಕೇಂದ್ರೀಯ ಸಿಹಿನೀರು ಜಲಕೃಷಿ ಸಂಶೋಧನಾ ಸಂಸ್ಥೆ (ಸಿಐಎಫ್ಎ)ಅಡಿಯಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಪ್ರಾದೇಶಿಕ ಸಂಶೋಧನಾ ಕೇಂದ್ರವು ಮೀನು ಮರಿ(ಸ್ಪಾನ್)ಸಂರಕ್ಷಣಾ ಕೇಂದ್ರದಲ್ಲಿ, ಹರಗಿ ಮೀನಿನ ತಳಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಈ ಜಾತಿಯ ಮೀನನ್ನು ಯಶಸ್ವಿಯಾಗಿ ಬೆಳೆಸಿ, ಇಂದು ತುಂಗಾ ಜಲಾಶಯಕ್ಕೆ ಯಶಸ್ವಿಯಾಗಿ ಬಿತ್ತನೆ ಮಾಡಿದೆ.

ಇಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ. ಬಿ. ಹೆಮ್ಲಾ ನಾಯಕ್ ಅವರು ಮತ್ತು ಬೆಂಗಳೂರಿನ ಹೆಸರಘಟ್ಟದ ??ಐಸಿಎಆರ್-ಸಿಐಎಫ್ಎ ವಿಜ್ಞಾನಿಗಳು ಸೇರಿ ಈ ಹರಗಿ ಮೀನಿನ ಸಂರಕ್ಷಣೆಯ ಪ್ರಕ್ರಿಯೆಯಾಗಿ ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯದ ನೈಸರ್ಗಿಕ ಆವಾಸಸ್ಥಾನವಾದ ಮೀನುಸಾಕಣೆ ಕೇಂದ್ರದಲ್ಲಿ ಹರಗಿ ಮೀನುಗಳನ್ನು ಬಿತ್ತನೆ ಮಾಡುವ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದರು.
ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ಡಾ. ಕೆ. ಎಂ. ಶಂಕರ್, ಡಾ. ಮಂಜಪ್ಪ ಮತ್ತು ಡಾ. ಹನುಮಂತಪ್ಪ ಸೇರಿದಂತೆ ಹಿರಿಯ ಪ್ರಾಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಮೊಗ್ಗದ ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಡ ಸಂರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು. ಈ ಸಂದರ್ಭದಲ್ಲಿ ೫೦ ಹರಗಿ ತಾಯಿ ಮೀನು ಮತ್ತು ೫೦೦೦ ಹರಗಿ ಮೀನು ಮರಿಗಳನ್ನು ತುಂಗಾ ಜಲಾಶಯಕ್ಕೆ ಬಿತ್ತನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ. ಬಿ. ಹೆಮ್ಲಾ ನಾಯಕ್ ಅವರು ಮಾತನಾಡಿ ಸ್ಥಳೀಯ ಮೀನು ಪ್ರಭೇದ ತಳಿಗಳನ್ನು ತನ್ನದೇ ನೈಸರ್ಗಿಕ ಆವಾಸಸ್ಥಾನದಲ್ಲಿ ಸಂರಕ್ಷಿಸುವ ಅಗತ್ಯವನ್ನು ಕುರಿತು ತಿಳಿಸಿದರು. ಹರಗಿ ಮೀನು ತೀವ್ರವಾಗಿ ಅಳಿವಿನಂಚಿನಲ್ಲಿರುವ ಸ್ಥಳೀಯ ಪ್ರಭೇದಗಳನ್ನು ಸಂರಕ್ಷಿಸುವಲ್ಲಿ ಬೆಂಗಳೂರಿನ ಹೆಸರಘಟ್ಟದ ಐಸಿಎಆರ್-ಸಿಐಎಫ್ಎ ಸಂಸ್ಥೆಯವರ ಪ್ರಯತ್ನಕ್ಕೆ ಅವರು ಶ್ಲಾಘನೆ ವ್ಯಕ್ತಪಡಿಸಿ ಹಾಗೂ ಇಂತಹ ಚಟುವಟಿಕೆಗಳಲ್ಲಿ ನಮ್ಮ ವಿಶ್ವವಿದ್ಯಾಲಯವು ಸದಾ ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿದರು. ಈ ಬಿತ್ತನೆ ಕಾರ್ಯಕ್ರಮವನ್ನು ಐಸಿಎಆರ್-ಸಿಐಎಫ್ಎ ಸಂಸ್ಥೆಯ ಪ್ರಧಾನ ವಿಜ್ಞಾನಿಗಳ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಹಾಗೂ ಈ ಪ್ರದೇಶದ ಪ್ರಮುಖ ಮೀನುಗಾರಿಕೆಯಲ್ಲಿ ಕಳೆದುಹೋದ ನೆಲೆಯನ್ನು ಮರಳಿ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು. ಜೊತೆಗೆ ಈ ಬಿತ್ತನೆಯು ಕ್ಷೀಣಿಸುತ್ತಿರುವ ಹರಗಿ ಮೀನು ತಳಿಯ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ ಹಾಗೂ ಜೀವವೈವಿಧ್ಯತೆಯ ಪುನಃಸ್ಥಾಪನೆಗೆ ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿದರು. ಈ ಮೀನು ಜಲವಾಸಿ ಕಳೆಗಳು ಮತ್ತು ಹುಲ್ಲುಗಳನ್ನು ಸೇವಿಸುವ ಸ್ಥಳೀಯ ಜಾತಿಗಳಲ್ಲಿ ಈ ಮೀನು ಒಂದಾಗಿದೆ ಎಂದು ಹೇಳಿದರು. ಆದ್ದರಿಂದ ಜಲಾಶಯಗಳು, ಕೆರೆಗಳಲ್ಲಿ ಮತ್ತು ನೀರಾವರಿ ಕಾಲುವೆಗಳಲ್ಲಿ ಜಲಚರ ಸಸ್ಯವರ್ಗವನ್ನು ನಿಯಂತ್ರಿಸುವಲ್ಲಿ ಈ ಮೀನನ್ನು ಸಾಕಬಹುದಾಗಿದೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮೀನುಗಾರಿಕೆ ಜಂಟಿ ನಿರ್ದೇಶಕರಾದ ಶ್ರೀ ಗಿರೀಶ್ ಓ. ಅವರು ಮಾತನಾಡುತ್ತಾ ಕರ್ನಾಟಕದ ಸ್ಥಳೀಯ ಮೀನುಗಳ ಸಂತಾನೋತ್ಪತ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಐಸಿಎಆರ್-ಸಿಐಎಫ್ಎ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ಇಂತಹ ಸ್ಥಳೀಯ ತಳಿಗಳನ್ನು ಸಂರಕ್ಷಿಸುವಲ್ಲಿ ಮೀನುಗಾರಿಕೆ ಇಲಾಖೆಯು ಸದಾ ಬೆಂಬಲ ನೀಡುತ್ತದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐಸಿಎಆರ್-ಸಿಐಎಫ್ಎ ಸಂಸ್ಥೆಯ ವಿಜ್ಞಾನಿ ಡಾ. ವಿನಯ್ ಟಿ. ಎನ್. ಮತ್ತು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಾಂತನಗೌಡ ಅವರು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಮತ್ತು ಶಿವಮೊಗ್ಗ ಜಿಲ್ಲಾ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ರಾಘವೇಂದ್ರ ಕೆ. ಎಸ್. ಈ ಕಾರ್ಯಕ್ರಮವನ್ನು ಸಂಯೋಜಿಸಿದರು.