
ಶಿವಮೊಗ್ಗ: ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಾರ್ವಜನಿಕರ ಆರೋಗ್ಯ ಇಲಾಖೆ(ಎನ್.ಹೆಚ್.ಎಂ.) ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಗಳಾದ ವಿಮಾ ಕವಚದ ಪ್ರಯೋಜನಗಳನ್ನು ಸರ್ಕಾರ ಆಕ್ಸಿಸ್ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷರಾದ ಮಾಜಿ ಸಂಸದ ಆಯನೂರು ಮಂಜುನಾಥ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಮಾ ಕವಚದ ಪ್ರಯೋಜನಗಳಿಂದಾಗಿ ಕರ್ತವ್ಯದ ಸಂದರ್ಭದಲ್ಲಿ ಅಥವಾ ಕರ್ತವ್ಯ ಮುಗಿದ ನಂತರ ಯಾವುದೇ ಅಪಘಾತದಿಂದ ಸಂಭವಿಸಿದ ಮರಣಕ್ಕೆ 60 ಲಕ್ಷ ರೂ., ಸಂಪೂರ್ಣ ಶಾಶ್ವತ ಅಂಗವೈಕಲ್ಯಗೊಂಡರೆ 60 ಲಕ್ಷ ರೂ., ಅಂಶಿಕ ಅಂಗವೈಕಲ್ಯಕ್ಕೆ ಶೇ. 75ರಷ್ಟು ವರೆಗಿನ ಪರಿಹಾರ, 60 ವರ್ಷ ವಯಸ್ಸಿನೊಳಗಿನ ಉದ್ಯೋಗಿಗಳಿಗೆ 10 ಲಕ್ಷ ರೂ. ವಿಮೆ, ಉದ್ಯೋಗಿಗಳ 18 ರಿಂದ 22 ವರ್ಷದೊಳಗಿನ ಮಕ್ಕಳ ಶಿಕ್ಷಣ ಸೌಲಭ್ಯಕ್ಕಾಗಿ 4ರಿಂದ 8 ಲಕ್ಷ ರೂ. ನೀಡಲಾಗುತ್ತದೆ ಎಂದರು.

ನೇರ ಗುತ್ತಿಗೆ ಉದ್ಯೋಗಿಗಳ ಸಾಮಾಜಿಕ ಭದ್ರತೆಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ರಾಜ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಬ್ಯಾಂಕ್ ಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆದು ಆಕ್ಸಿಸ್ ಬ್ಯಾಂಕ್ ಉಚಿತವಾಗಿ ಈ ಸೌಲಭ್ಯ ನೀಡಲು ಒಪ್ಪಿದ್ದರಿಂದ ಆ ಬ್ಯಾಂಕ್ನೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡು ವಿಮಾ ಕವಚದ ಪ್ರಯೋಜನಗಳನ್ನು ನೀಡಲು ಉದ್ದೇಶಿಸಿದೆ ಎಂದರು.
ಉದ್ಯೋಗಿಯ ವೇತನ ಖಾತೆಗೆ ಮೊದಲ ವೇತನ ಜಮೆಯಾದ 15 ದಿನದ ನಂತರ ವಿಮಾ ರಕ್ಷಣೆ ಚಾಲ್ತಿಗೆ ಬರುತ್ತದೆ. ಈ ಯೋಜನೆಯಿಂದ 28400 ಅನುಮೋದಿತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 25 ಸಾವಿರ ನೇರ ಗುತ್ತಿಗೆ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ ಮತ್ತು ಅವರ ಕುಟುಂಗಳಿಗೆ ಆರ್ಥಿಕ ಭದ್ರತೆ ಹಾಗೂ ಆತ್ಮಸ್ಥೈರ್ಯ ಒದಗಿಸುತ್ತದೆ ಎಂದರು.

ಸಂಘದ ಪ್ರಯತ್ನದಿಂದಾಗಿ ನೇರ ಗುತ್ತಿಗೆ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಈ ಯೋಜನೆ ಜಾರಿಗೆ ತರಲು ನೇತೃತ್ವ ವಹಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಂಘ ಅಭಿನಂದಿಸುತ್ತದೆ ಎಂದರು.
ಒಪಿಎಸ್ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ಅವರು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರ ಮೂರು ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಈಗಲಾದರೂ ಒತ್ತಾಯಿಸಿರುವುದು ಸಂತಸದ ಸಂಗತಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಣ್ಣಯ್ಯ, ಧೀರರಾಜ್ ಹೊನ್ನವಿಲೆ, ಕೃಷ್ಣಪ್ಪ, ಲಕ್ಷ್ಮಣಪ್ಪ, ನೇರ ಗುತ್ತಿಗೆ ಉದ್ಯೋಗಿಗಳ ಸಂಘದ ಜಿಲ್ಲಾ ಅಧ್ಯಕ್ಷ ಶಂಕರ್ ಹರÀಗವಾಡಿ, ಕಾರ್ಯದರ್ಶಿ ಕಿರಣ್, ರವಿ ಉಪಸ್ಥಿತರಿದ್ದರು.
ನಾಳೆ ಗೋವಿಂದಾಪುರದಲ್ಲಿ ಆಶ್ರಯ ಮನೆಗಳ ಹಂಚಿಕೆ ಕಾರ್ಯಕ್ರಮವು ವಸತಿ ಸಚಿವ ಜಮೀರ್ ಅಹಮ್ಮದ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ಸುಮಾರು 650 ಮನೆಗಳ ವಿತರಣೆ ನಡೆಯಲಿದೆ. ಈ ಮನೆಗಳ ವಿತರಣೆಯ ಪಟ್ಟಿಯನ್ನು ಕೆಲವರು ಕಿಡಿಗೇಡಿಗಳು ಇಟ್ಟುಕೊಂಡು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ನೀವು ಬಯಸಿದ ಮನೆಯನ್ನೇ ನಿಮಗೆ ವಿತರಿಸುತ್ತೇವೆ ಎಂದು 50 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಆಯನೂರು ಮಂಜುನಾಥ್ ಆರೋಪಿಸಿದರು.ಸುಮಾರು 500 ಮನೆಗಳನ್ನು ಗುರಿ ಇಟ್ಟುಕೊಂಡು ಎರಡೂವರೆ ಕೋಟಿ ರೂ. ಸಂಗ್ರಹ ಮಾಡುವ ಯೋಜನೆಯನ್ನು ಕಿಡಿಗೇಡಿಗಳು ಮಾಡಿದ್ದು, ಇದರಲ್ಲಿ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಗುಮಾನಿ ಇದ್ದು, ಈ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರು ಮತ್ತು ಶಾಸಕರ ಗಮನಕ್ಕೆ ತಂದಿದ್ದೇನೆ. ಫಲಾನುಭವಿಗಳು ಮೋಸ ಹೋಗಬೇಡಿ. ಒಂದು ವೇಳೆ ಹಣ ನೀಡಿದ್ದಲ್ಲಿ ಹಣ ಪಡೆದವರ ಕೊರಳುಪಟ್ಟಿ ಹಿಡಿದು ಕಪಾಳಕ್ಕೆ ಬಾರಿಸಿ ವಸೂಲಿ ಮಾಡಿ. ಒಂದು ವೇಳೆ ಪೊಲೀಸ್ ಠಾಣೆಗೆ ಅವರು ದೂರು ನೀಡಿದರೆ ನಿಮ್ಮ ಪರವಾಗಿ ನಾನು ನಿಲ್ಲುತ್ತೇನೆ ಎಂದರು.