ಶಿವಮೊಗ್ಗ ರಂಗಾಯಣದ ಸಂದೇಶ್ ಜವಳಿ
ಶಿವಮೊಗ್ಗ, ಫೆ.3:
ಶಿವಮೊಗ್ಗ ರಂಗಾಯಣ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 6ರಿಂದ 9ರವರೆಗೆ ನಾಲ್ಕು ದಿನಗಳ ಕಾಲ ಮಹಿಳಾ ನಾಟಕೋತ್ಸವ ‘ಜೀವನ್ಮುಖಿ’ ಆಯೋಜಿಸಿದೆ ಎಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ತಿಳಿಸಿದರು.
ಮಹಿಳೆಯರನ್ನು ರಂಗಭೂಮಿಯತ್ತ ಸೆಳೆದು ಕನ್ನಡ ರಂಗಭೂಮಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕು ದಿನಗಳ ಉತ್ಸವದಲ್ಲಿ ಮಹಿಳಾ ವಿಚಾರಗಳನ್ನು ಪ್ರಧಾನವಾಗಿ ಹೊಂದಿರುವ ಅತ್ಯುತ್ತಮ ನಾಟಕಗಳ ಪ್ರದರ್ಶನ, ಏಕವ್ಯಕ್ತಿರಂಗ ಪ್ರಯೋಗ, ವಿಚಾರಗೋಷ್ಠಿ ಮತ್ತು ರಂಗಗೀತೆಗಳ ಕ
ರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಮಾರ್ಚ್ 6ರಂದು ಶನಿವಾರ ಖ್ಯಾತ ವೈದ್ಯೆ ರಜನಿ ಎ ಪೈ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮೇಯರ್ ಸುವರ್ಣ ಶಂಕರ್, ರಂಗಸಮಾಜ ಸದಸ್ಯ ಆರ್.ಎಸ್.ಹಾಲಸ್ವಾಮಿ ಭಾಗವಹಿಸುವರು. ನಿರ್ದೇಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸುವರು. ಉದ್ಘಾಟನಾ ಸಮಾರಂಭದ ನಂತರ ರಂಗ ಕಲಾವಿದೆ ಗಾಯಕಿ ಸವಿತಕ್ಕ ಅವರು ಅಭಿನಯಿಸಿದ, ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ಏಕವ್ಯಕ್ತಿ ನಾಟಕ ‘ಉಧೋಉಧೋ ಎಲ್ಲವ್ವ’ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 7ರಂದು ಭಾನುವಾರ ಸಂಜೆ 6.30ಕ್ಕೆ ಬೆಂಗಳೂರಿನ ರಂಗಪಯಣ ಪ್ರಸ್ತುತಿಯ ರಾಜ್ಗುರು ಹೊಸಕೋಟೆ ನಿರ್ದೇಶನದ, ಪ್ರವೀಣ್ ಸೂಡ ರಚನೆಯ ‘ಗುಲಾಬಿ ಗ್ಯಾಂಗ್-ಭಾಗ 01’ ನಾಟಕ ಪ್ರದರ್ಶನ ನಡೆಯಲಿದೆ.
ಮಾರ್ಚ್ 8ರಂದು ಸೋಮವಾರ ಬೆಳಿಗ್ಗೆ 10.15 ರಿಂದ `ಕನ್ನಡರಂಗ ಭೂಮಿಯಲ್ಲಿ ಮಹಿಳೆಯರು ಅಂದು ಮತ್ತು ಇಂದು’ ಎಂಬ ವಿಚಾರವಾಗಿ ಸಂವಾದ ಏರ್ಪಡಿಸಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಹೆಗ್ಗೋಡಿನ ರಂಗಕರ್ಮಿ ವಿದ್ಯಾಹೆಗಡೆ ಭಾಗವಹಿಸುವರು. ಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ನೃತ್ಯಕಲಾವಿದೆ ಮತ್ತು ಮನೋವೈದ್ಯರಾದ ಡಾ.ಕೆ.ಎಸ್.ಪವಿತ್ರ ವಹಿಸುವರು. ಬೆಂಗಳೂರಿನ ರಂಗಕರ್ಮಿ ನಯನಸೂಡ ಭಾಗವಹಿಸುವರು. ವಿಚಾರಗೋಷ್ಠಿಯ ನಂತರ ಯುವ ರಂಗಕರ್ಮಿ ಕು.ಮೇದಿನಿ ಕೆಳಮನೆ ಇವರು ನಿರ್ದೇಶಿಸಿದ, ವೈದೇಹಿ ಕಥೆ ಆಧಾರಿತ ‘ದಾಳಿ’ ಕಿರು ಚಲನಚಿತ್ರ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 12.30 ರಿಂದ 1.30 ರವರೆಗೆ ಶಿವಮೊಗ್ಗದ ಮಧುರ ಕಲಾವೃಂದ ವತಿಯಿಂದ ಗಾಯಕಿ ನಾಗರತ್ನ ನೇತೃತ್ವದಲ್ಲಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಂಜೆ 6.30 ರಿಂದ ಗುಲಾಬಿ ಗ್ಯಾಂಗ್ ಭಾಗ-02 ನಾಟಕ ಪ್ರದರ್ಶನವಿರುತ್ತದೆ ಎಂದರು.
ಮಾರ್ಚ್ 9ರಂದು ಮಂಗಳವಾರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಮ್.ಎಲ್.ವೈಶಾಲಿ ಮತ್ತು ಅಪರ ಜಿಲ್ಲಾಧಿಕಾರಿ .ಜಿ. ಅನುರಾಧ ಭಾಗವಹಿಸುವರು. ರಂಸಮಾಜದ ಸದಸ್ಯೆ ಡಾ.ಹೆಲನ್ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ನಂತರ ಶಿವಮೊಗ್ಗದ ಸಹಚೇತನ ನಾಟ್ಯಾಲಯ ವತಿಯಿಂದ ನೃತ್ಯಗುರು ಸಹನಾಚೇತನ್ ನಿರ್ದೇಶನದಲ್ಲಿ ಡಾ.ಎ.ಜಿ.ಗೋಪಾಲಕೃಷ್ಣ ಕೊಳ್ತಾಯ ರಚನೆಯ ಶರಣೆ ಅಕ್ಕಮಹಾದೇವಿಯ ಜೀವನಗಾಥೆಯ ‘ದಾಕ್ಷಿಣಾತ್ಯ ತಪಸ್ವಿನಿ’ ನೃತ್ಯ ನಾಟಕ ಪ್ರದರ್ಶನ ನಡೆಯಲಿದೆ.
ಮಹಿಳಾ ರಂಗೋತ್ಸವದ ನಾಟಕ ಪ್ರದರ್ಶನಗಳಿಗೆ ಪ್ರತಿ ನಾಟಕಕ್ಕೆರೂ.30 ಪ್ರವೇಶ ಶುಲ್ಕವಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಅವರು ಮನವಿ ಮಾಡಿದರು. ರಂಗಸಮಾಜ ಸದಸ್ಯ ಹಾಲಸ್ವಾಮಿ, ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.


