*ರಾಜಿನಾಮೆ ಅಂಗೀಕರಿಸಿದ ಸಿಎಂ ಬಿಎಸ್ವೈ? *ಶಿವಮೊಗ್ಗದಲ್ಲಿ ಸಂಘಟನೆಗಳಿಂದ ಪ್ರತಿಭಟನೆ
ಬೆಂಗಳೂರು, ಮಾ.03:
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ರಾಜೀನಾ ಮೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸೆಕ್ಸ್ ಸಿಡಿ ಬಯಲಿಗೆ ಬಂದ ಬೆನ್ನಲ್ಲೇ ಅಜ್ಞಾತ ಸ್ಥಳಕ್ಕೆ ಹೋಗಿರುವ ರಮೇಶ್ ಜಾರಕಿಹೊಳಿ ಅವರು, ಇಂದು ಸಾಕಷ್ಟು ಚರ್ಚೆಗಳು ರಾಜಕೀಯ ಪ್ರಹಸನದ ಬಳಿಕ ರಾಜಿನಾಮೆ ನೀಡಿದ್ದರು. ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ರಮೇಶ್ ಜಾರಕಿ ಹೊಳಿ ರಾಜಿನಾಮೆ ಪತ್ರ ರವಾನಿಸಿದ್ದು, ಈ ಘಟನೆ ಯಿಂದ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಒಂದೇ ಒಂದು ಕಾರಣದಿಂದಾಗಿ ನನ್ನ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆ ಮಾಡಿದ್ದೇನೆ. ಈ ಪ್ರಕರಣದ ಕುರಿತು ಕೂಲಂಕುಷ ತನಿಖೆಯಾಗಬೇಕಿದ್ದು, ತನಿಖೆ ಬಳಿಕ ನಾನು ನಿರ್ದೋಷಿ ಎಂದು ಬಹಿರಂಗವಾದ ಬಳಿಕ ಮತ್ತೆ ನನ್ನ ಸ್ಥಾನ ಪಡೆಯುತ್ತೇನೆ ಎಂದು ಹೇಳಿದ್ದಾರೆ ಎಂದು ವರದಿಯಾಗಿತ್ತು.
ಈದೀಗ ಈ ರಾಜಿನಾಮೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಂಗೀಕರಿಸಿದ್ದು, ರಾಜ್ಯಪಾಲರ ಅನುಮೋದನೆಗಾಗಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಜಾರಕಿಹೊಳಿ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ
ಬೆಂಗಳೂರು: ರಾಸಲೀಲೆ ವಿಡಿಯೊ ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿಲ್ಲ. ಈಗಾಗಲೇ ಒಂದು ದೂರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆ ಬಗ್ಗೆ ವಿಸ್ತೃತ ತನಿಖೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಪ್ರತಿಕೃತಿ ದಹಿಸಿದ ಜಿಲ್ಲಾ ಕಾಂಗ್ರೆಸ್

ಶಿವಮೊಗ್ಗ: ಲೈಂಗಿಕ ಹಗರಣಕ್ಕೆ ಸಿಲುಕಿದ ಬಿಜೆಪಿ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಗಳು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಕೂಡಲೇ ತನ್ನ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇ ಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಮೇಶ್ ಜಾರಕಿಹೊಳಿಯ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ತಾವು ಸಂಸ್ಕೃತಿ ಉಳ್ಳ ಪಕ್ಷದವರು ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ಬಣ್ಣ ಬಯಲಾಗಿದೆ. ಅಧಿಕಾರಕ್ಕೆ ಬಂದಾಗೆಲ್ಲಾ ಬಿಜೆಪಿಯ ಸಚಿವರು ಅನೇಕರು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡು ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕುವುದಲ್ಲದೇ, ಅಮಾಯಕ ಹೆಣ್ಣು ಮಕ್ಕಳಿಗೆ ಹಲವು ಅಮೀಷಗ ಳನ್ನು ಒಡ್ಡಿ, ಅವರನ್ನು ಬಳಸಿಕೊಂಡು ಅನೈತಿಕ ಕಾಮದಾಟದ ಸಿಡಿ ವೈರಲ್ ಆಗಿದ್ದು, ಸರ್ಕಾರ ಸಂಬಂಧ ಪಟ್ಟ ಸಚಿವರ ಮೇಲೆ ಕಾನೂನು ಕ್ರಮಕೈ ಗೊಳ್ಳಬೇಕೆಂದು ಕಾಂಗ್ರೇಸ್ ಆಗ್ರಹಿಸಿದೆ.
ಸದಾ ಕಾಂಗ್ರೆಸ್ ನ್ನುಟೀಕಿಸುತ್ತಿದ್ದ ಸಿ.ಟಿ. ರವಿ, ಶೋಭಾಕರಂದ್ಲಾಜೆ, ಕೆ.ಎಸ್.ಈಶ್ವರಪ್ಪನಂತವರು ಈಗೇಕೆ ಮೌನವಹಿಸಿದ್ದಾರೆ. ಬಿಜೆಪಿ ಪರೋಕ್ಷವಾಗಿ ಇಂತಹವರನ್ನು ಬೆಂಬಲಿಸುತ್ತಿದ್ದು, ಬಿಜೆಪಿಗೆ ಬಂದ ನಂತರ ಅವರ ಬಣ್ಣ ಬಯಲಾಗಿದೆ. ಅನೇಕ ಹಗರಣಗಳನ್ನು ನಡೆಸಿ ಅಧಿಕಾರದ ಮದದಲ್ಲಿ ತಾವು ಏನು ಬೇಕಾದರೂ ಮಾಡಬಹುದು ಎಂಬ ಭಾವನೆಯನ್ನು ಪ್ರದರ್ಶಿಸುತ್ತಿರುವ ಇಂತಹ ಸಚಿವರನ್ನು ವಜಾ ಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೇಸ್ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸುಂದರೇಶ್, ಶಾಸಕ ಆರ್. ಪ್ರಸನ್ನಕುಮಾರ್, ಪ್ರಮುಖರಾದ ರಾಮೇಗೌಡ, ಶೇಷಾದ್ರಿ, ರವಿಕುಮಾರ್, ಹೆಚ್.ಸಿ. ಯೋಗೀಶ್, ಗಿರೀಶ್, ಆರೀಫ್ವುಲ್ಲಾ, ಸ್ಟೇಲ್ಲಾ ಮಾರ್ಟಿನ್, ಸೌಗಂಧಿಕ, ಮಂಜುಳಾ ಶಿವಣ್ಣ, ಯಮುನಾ ರಂಗೇಗೌಡ ಮೊದಲಾದವರು ಇದ್ದರು.
ಜಾರಕಿಹೊಳಿ ವಜಾಕ್ಕೆ ಕೆವೈಎಸ್ ಆಗ್ರಹ
ಶಿವಮೊಗ್ಗ: ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕರುನಾಡ ಯುವ ಶಕ್ತಿ ಸಂಘಟನೆ (ಕೆವೈಎಸ್) ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಸಚಿವರೇನೊ ನಾನು ತಪ್ಪು ಮಾಡಿಲ್ಲ ವಿಡಿಯೋದಲ್ಲಿರುವುದು ನಾನಲ್ಲ. ನನ್ನ ಮುಖವನ್ನು ಎಡಿಟ್ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಈ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕಾಗಿದೆ ಎಂದು ಆಗ್ರಹಿಸಿದೆ.
ಕೆವೈಎಸ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎಸ್. ವಸಂತ್ ಕುಮಾರ್, ರಾಜ್ಯಾಧ್ಯಕ್ಷ ಎ.ಆರ್.ಶರವಣ, ರಾಜ್ಯ ಯುವ ಘಟಕದ ಅಧ್ಯಕ್ಷ ಚಿದಾನಂದ, ಪದಾಧಿಕಾರಿಗಳಾದ ರಮೇಶ್, ವಿಕ್ರಮ್, ಬಸವರಾಜ್, ಶಿವಣ್ಣ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.
ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಶಿವಮೊಗ್ಗ ಸಚಿವ ರಮೇಶ್ ಜಾರಕಿ ಹೊಳಿ ರಾಸಲೀಲೆ ಪ್ರಕರಣ ಬಹಿರಂಗಗೊಂಡಿದ್ದು, ಕೂಡಲೇ ಮುಖ್ಯಮಂತ್ರಿಗಳು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ಆಗ್ರಹಿಸಿ ಯುವ ಕಾಂಗ್ರೆಸ್ ನಿಂದ ನಿನ್ನೆ ಸಂಜೆ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಮುಖ್ಯ ಮಂತ್ರಿ ಗಳು ಕೂಡಲೇ ಇವರನ್ನು ಸಚಿವ ಸಂಪುಟ ದಿಂದ ವಜಾ ಗೊಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮುಖ್ಯ ಮಂತ್ರಿ ಗಳ ಮನೆಗೆ ಮುತ್ತಿಗೆ ಹಾಕಿ ಯುವ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾದ ಹೆಚ್ .ಪಿ. ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಯುವ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಎಂ ಪ್ರವೀಣ್ ಕುಮಾರ್, ರಾಜ್ಯ ಕಾರ್ಯದರ್ಶಿ ಆರ್ ಕಿರಣ್, ಶಿವಮೊಗ್ಗ ನಗರ ಅಧ್ಯಕ್ಷ ಬಿ ಲೋಕೇಶ್ ಪದಾಧಿಕಾರಿಗಳಾದ ಕುಮರೇಶ್ , ಪುಷ್ಪಕ್ ಕುಮಾರ್, ಅರುಣ್ ನವುಲೆ, ಜಮೀಲ್ ಮಹೇಂದ್ರ, ಜೈನ್ ಪವನ್ ,ರಾಕೇಶ್, ಗಗನ್ ಪರಶುರಾಮ್ ಮಸ್ತಾನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.