ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ತಾಲ್ಲೂಕಿನ ಐತಿಹಾಸಿಕ ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕದ ಈ ವರ್ಷದ ಭವಿಷ್ಯವಾಣಿ ಹೊರ ಬಿದ್ದಿದೆ. " ತುಂಬಿದ ಕೊಡ ತುಳಿಕಿತಲೇ ಪರಾಕ್ "ಎನ್ನುವ ಕಾರ್ಣಿಕ ನುಡಿದರು. ಹೀಗೆ ಪ್ರತಿ ವರ್ಷದಂತೆ ಈ ವರ್ಷವೂ ಮೈಲಾರ ಗೊರವಯ್ಯ ಕಾರ್ಣಿಕವನ್ನು ನುಡಿದರು. ಈ ವರ್ಷ ರಾಜ್ಯದಲ್ಲಿ ಮಳೆ,ಬೆಳೆ ಸಮೃದ್ಫಿಯಾಗಲಿದೆ ಎಂದು ಕಾರ್ಣಿಕ ಭವಿಷ್ಯವಾಣಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.
ಈ ಕಾರ್ಣಿಕಕ್ಕಾಗಿ ಜನರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಹಾಗೆಯೇ ಜನರು ಮೈಲಾರಲಿಂಗೇಶ್ವರ ಕಾರ್ಣಿಕವನ್ನು ಹೆಚ್ಚಾಗಿ ನಂಬುತ್ತಾರೆ. ಅಲ್ಲದೇ ಅದು ಇಡೀ ವರ್ಷದ ಭವಿಷ್ಯವೆಂದು ಹೇಳಲಾಗುತ್ತದೆ. ಈ ಕಾರ್ಣಿಕದಲ್ಲಿ ಮಳೆ, ಬೆಳೆ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಿತಿ ಗತಿ ಏನಾಗಲಿದೆ ಎಂಬುದರ ಬಗ್ಗೆ ಹೇಳಲಾಗುತ್ತದೆ. ಹಾಗಾಗಿ ಜನರು ಕಾರ್ಣಿಕ ಕೇಳಲು ತುದಿಗಾಲಲ್ಲಿ ಕಾಯುತ್ತಿರುತ್ತಾರೆ.
ಈ ವರ್ಷದ ಕಾರ್ಣಿಕ ಕೇಳಿ ಲಕ್ಷಾಂತರ ಭಕ್ತರು ಪುನೀತರಾಗಿದ್ದಾರೆ.ಈ ಕಾರ್ಣಿಕದ ನುಡಿಯಿಂದ ದೇಶದ ಒಳಿತು -ಕೆಡಕುಗಳ ವಿಶ್ಲೇಷಣೆ ಮಾಡಲಾಗುತ್ತದೆ. ನಾಡಿನ ಗಣ್ಯರ ಜೀವನ, ರೈತಾಪಿ ವರ್ಗಕ್ಕೆ ಶುಭ-ಅಶುಭ, ಮಕ್ಕಳು, ಹಿರಿಯ ಜೀವನ, ನಾಡಿನ ಒಳಿತು ಕೆಡುಕುಗಳ ಮುನ್ನೆಚ್ಚರಿಕೆ ಕೈಗನ್ನಡಿ ಆಗಿರುತ್ತದೆ ಎಂದರೆ ತಪ್ಪಾಗಲಾರದು.
ನಾಡಿನ ಜನತೆಗೆ ಮೈಲಾರಲಿಂಗದ ಕಾರ್ಣಿಕ ಕೇಳಿದ ಕೂಡಲೇ ಜನರು ಇದು ಶುಭದ ನುಡಿ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ,ಬೆಳೆ ಸಮೃದ್ಧಿಯಾಗಿ ಬರಲಿದೆ, ಇದರಿಂದ ನಾಡಿನ ರೈತರ ಮುಖದಲ್ಲಿ ನಗುವಿನ ಮಂದಹಾಸ ಮೂಡಿಸುವ ಭರವಸೆ ಸಿಕ್ಕಂತಾಗಿದೆ.ಹೀಗೆ ಎಲ್ಲಾ ರೀತಿಯಿಂದಲೂ ಶ್ರೀ ಮೈಲಾರ ಕಾರ್ಣಿಕೋತ್ಸವವನ್ನು ಭಕ್ತರು ತಮ್ಮದೇ ಲೆಕ್ಕಾಚಾರದಲ್ಲಿ ವಿಶ್ಲೇಷಿಸುತ್ತಾರೆ.
ಈ ಕಾರ್ಣಿಕ ನುಡಿಯಲ್ಲಿ ಪ್ರಸಕ್ತ ವರ್ಷದ ಮಳೆ, ಬೆಳೆ, ರಾಜಕೀಯದ ಏಳು-ಬೀಳು, ಆರ್ಥಿಕ, ವಾಣಿಜ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳು ಹಾಗೂ ದೇಶದ ಭವಿಷ್ಯ ಅಡಗಿರುತ್ತದೆ.ಕಾರ್ಣಿಕ ನುಡಿ ಭವಿಷ್ಯದ ಸತ್ಯವಾಣಿ ಎಂದು ಭಕ್ತರು ನಂಬುತ್ತಾರೆ.
ಶ್ರೀಮೈಲಾರಲಿಂಗೇಶ್ವರ ದೇಗುಲದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಈ ವರ್ಷದ ಕಾರ್ಣಿಕವನ್ನು ಶುಭ ಸೂಚಕವಾಗಿದೆ ಎಂದು ತಿಳಿಸಿದ್ದಾರೆ. ಎಲ್ಲವೂ ಸೂಸೂತ್ರವಾಗಿರಲಿದೆ. ಮಳೆ, ಬೆಳೆ, ಎಲ್ಲವೂ ಕೂಡ ಸಂಪನ್ನವಾಗಲಿದೆ. ರೈತರಿಗೆ ಶುಭವಾಗಲಿದೆ. ಕಳೆದ ಬಾರಿಯೂ ಉತ್ತಮ ಮಳೆ, ಬೆಳೆ ಎಲ್ಲವೂ ಉತ್ತಮವಾಗಿದ್ದವು ಎಂದು ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಣೆ ಮಾಡಿದ್ದಾರೆ.
ಈಗಾಗಲೇ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಬೀಡು ಬಿಟ್ಟಿದ್ದು, ಕಾರ್ಣಿಕೋತ್ಸವದ ಮಾರನೆಯ ದಿನ ಜರುಗಲಿರುವ ಸರಪಳಿ ಪವಾಡದವರೆಗೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
ಶನಿವಾರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯು ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುವುದು. ಸಾಯಂಕಾಲ 4:30ಕ್ಕೆ ದೇವಸ್ಥಾನ ಗುರು ಪರಂಪರೆಯ ಶ್ರೀ ಗುರುಗಳಿಂದ ಬಂಡಾರ ಆಶೀರ್ವಾದ ನಂತರ ಕಂಚಿ ವೀರರಿಂದ ಪವಾಡ ಮತ್ತು ಗೊರವಯ್ಯ ರವರಿಂದ ಸರಪಳಿ ಪವಾಡಗಳು ನಡೆಯುವವು.
ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.

: ಗೊರವಯ್ಯ ರಾಮಜ್ಜ ನುಡಿಯುವ ಕಾರ್ಣಿಕ :
14ರ ಸಂಜೆ 5.30ಕ್ಕೆ ಡೆಂಕಣ ಮರಡಿಯಲ್ಲಿ 11 ದಿನಗಳ ಕಾಲ ಉಪವಾಸ ವ್ರತದಲ್ಲಿರುವ ಗೊರವಯ್ಯ ಸುಮಾರು 20 ಅಡಿ ಉದ್ದದ ತುಪ್ಪ ಸವರಿದ ಐತಿಹಾಸಿಕ ಬಿಲ್ಲನ್ನು ಏರಿ ಸದ್ದಲೇ..! ಎಂದಾಗ ನೆರೆಯುವ ಲಕ್ಷಾಂತರ ಭಕ್ತರು, ಪಶು, ಪಕ್ಷಿ ಸೇರಿದಂತೆ ಎಲ್ಲ ಕಡೆಗೂ ನಿಶ್ಯಬ್ದ ಆವರಿಸುತ್ತದೆ. ಆ ಕ್ಷಣದಲ್ಲೇ ಗೊರವಯ್ಯ ಕಾರ್ಣಿಕ ನುಡಿಯುವುದು ಸಂಪ್ರದಾಯ.
ಲಕ್ಷೋಪ ಲಕ್ಷ ಭಕ್ತರಿದ್ದ ಪ್ರದೇಶದಲ್ಲಿ ಒಂದು ಸೂಜಿ ಮೊನೆ ಬಿದ್ದರೂ ಕೇಳಿಸುವಷ್ಟು ಮೌನ ಆವರಿಸುತ್ತದೆ. ನಂತರ ಗೊರವಪ್ಪ ರಾಮಜ್ಜ . “ತುಂಬಿದ ಕೊಡ ತುಳುಕೀತಲೇ ಪರಾಕ್” ಎಂದು ಶ್ರೀ ಮೈಲಾರಲಿಂಗನ ಆಶೀರ್ವಾದದಂತೆ ಕಾರ್ಣಿಕದ ಭವಿಷ್ಯವಾಣಿ ನುಡಿದು ಭೂಮಿಗೆ ಧುಮುಕುತ್ತಾನೆ. ಇದು ನಿಜಕ್ಕೂ ಕ್ಷಣ ಕಾಲ ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿರಿಸುತ್ತದೆ.