![WhatsApp Image 2025-02-13 at 2.33.18 PM](https://tungataranga.com/wp-content/uploads/2025/02/WhatsApp-Image-2025-02-13-at-2.33.18-PM-1024x461.jpeg)
ಶಿವಮೊಗ್ಗ: ನಗರಕ್ಕೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಎಂಟ್ರಿ ನೀಡಿದ್ದು, ಸ್ಥಳೀಯ ಆಟೋ ಚಾಲಕರು ಮತ್ತು ಮಾಲೀಕರನ್ನು ಕಂಗಾಲಾಗಿಸಿದೆ.
ಇಂದು ದುರ್ಗಿಗುಡಿಯಲ್ಲಿ ರ್ಯಾಪಿಡೋ ಬೈಕ್ ವೊಂದು ಸಾರ್ವಜನಿಕರಿಗೆ ಬಾಡಿಗೆ ಸೇವೆ ನೀಡುತ್ತಿದ್ದುದನ್ನು ಕಂಡು ಸ್ಥಳೀಯ ಆಟೋ ಚಾಲಕರು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗಾಗಲೇ ಆಟೋಗಳಿಗೆ ಪ್ರಯಾಣಿಕರಿಲ್ಲದೇ ನಾವು ಕಂಗಾಲಾಗಿದ್ದೇವೆ. ಪೆಟ್ರೋಲ್, ಡೀಸೆಲ್, ಬಿಡಿಭಾಗಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಹಾಗೂ ಜೀವನ ನಿರ್ವಹಣೆಗೆ ಕಷ್ಟ ಸಾಧ್ಯವಾಗುತ್ತಿದೆ. ಬಾಡಿಗೆಯೇ ಕಡಿಮೆಯಾಗಿದ್ದು, ಇದರ ನಡುವೆ ಈ ರೀತಿ ಬಾಡಿಗೆ ಬೈಕ್ ಟ್ಯಾಕ್ಸಿಗಳು ಬಂದರೆ ಇನ್ನಷ್ಟು ತೊಂದರೆಯಾಗಲಿದೆ ಎಂದು ದುರ್ಗಿಗುಡಿ ಆರ್.ಎಂ.ಎಸ್. ಆಟೋ ನಿಲ್ದಾಣದ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
![](http://tungataranga.com/wp-content/uploads/2023/04/Screenshot_2023_0226_070755-1.jpg)
ರ್ಯಾಪಿಡೋ ಬೈಕ್ ಸಂಚಾರಕ್ಕೆ ಸಾರಿಗೆ ಇಲಾಖೆ ಅನುಮತಿ ಇದೆಯಾ ಎಂದಿದ್ದಕ್ಕೆ ಅದು ತನಗೆ ಗೊತ್ತಿಲ್ಲ ಎಂದು ತಿಳಿಸಿದ ಬೈಕ್ ಸವಾರ ಈಗಾಗಲೇ ಬೆಂಗಳೂರಿನಂತಹ ಮಹಾನಗರಗಳಲ್ಲಿ ಇವು ಕಾರ್ಯನಿರ್ವಹಿಸುತ್ತಿವೆ. ಅಂತೆಯೇ ನಾವು ಶಿವಮೊಗ್ಗದಲ್ಲಿ ಕನಿಷ್ಟ ದರದಲ್ಲಿ ಸಾರ್ವಜನಿಕರಿಗೆ ಬಾಡಿಗೆ ಸೇವೆ ನೀಡುತ್ತಿದ್ದೇವೆ. ಆರಂಭದ ಎರಡು ಕಿ.ಮೀ.ವರೆಗೆ ೨೦ ರೂ., ನಂತರದ ಎರಡು ಕಿ.ಮೀ.ವರೆಗೆ ೩೦ ರೂ. ಬಾಡಿಗೆ ನಿಗದಿ ಮಾಡಿ ಓಡಿಸುತ್ತಿರುವುದಾಗಿ ರ್ಯಾಪಿಡೋ ಬೈಕ್ ಸವಾರ ತಿಳಿಸಿದ್ದಾರೆ.
ಇದೇ ನನ್ನ ಮೊದಲ ಬಾಡಿಯಾಗಿರುತ್ತದೆ. ಇದರಿಂದಾಗಿ ನಮ್ಮಂತಹ ನಿರುದ್ಯೋಗಿ ಯುವಕರಿಗೆ ಕೆಲಸ ಸಿಕ್ಕಂತಾಗಿದ್ದು, ಜೀವನ ನಿರ್ವಹಣೆಗೆ ಅನುಕೂಲವಾಗಿದೆ. ಸಾರ್ವಜನಿಕರಿಗೂ ಒಳ್ಳೆಯದಾಗಿದೆ. ಆನ್ ಲೈನ್ ನಲ್ಲಿ ಗ್ರಾಹಕರು ಬುಕ್ ಮಾಡಿದ್ದರು. ಅದರ ಅನುಸಾರ ನಾನು ಇಲ್ಲಿಗೆ ಬಾಡಿಗೆ ಸೇವೆ ನೀಡಲು ಬಂದಿದ್ದೇನೆ ಎಂದು ಓಲಾ ರ್ಯಾಪಿಡೋ ಬೈಕ್ ಸವಾರ ಹೇಳಿದ್ದಾರೆ.
![](http://tungataranga.com/wp-content/uploads/2025/02/qwww.jpg)
ಆದರೆ ಇದನ್ನು ಒಪ್ಪದ ಆಟೋ ಚಾಲಕರು ಶಿವಮೊಗ್ಗದಂತಹ ನಗರಗಳಲ್ಲಿ ಈ ರೀತಿ ಬಾಡಿಗೆ ಬೈಕ್ ಟ್ಯಾಕ್ಸಿಗಳು ಬಂದರೆ ಆಟೋ ಚಾಲಕರು ಮತ್ತು ಮಾಲೀಕರಿಗೆ ಕಷ್ಟವಾಗುತ್ತದೆ. ಇದನ್ನು ನಿರ್ಬಂಧಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಅಲ್ಲದೇ, ಬಾಡಿಗೆ ಮಾಡುವ ರ್ಯಾಪಿಡೋ ಬೈಕ್ ಗಳು ತಮ್ಮದೇ ಖಾಸಗಿ ವೈಟ್ ಬೋರ್ಡ್ ಬೈಕ್ ಗಳಲ್ಲಿ ಸೇವೆ ನೀಡುತ್ತಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ ಮತ್ತು ಇದಕ್ಕೆ ಶಿವಮೊಗ್ಗ ನಗರದಲ್ಲಿ ಅವಕಾಶವಿಲ್ಲ ಎಂದು ಹೇಳಿ ಇಬ್ಬರು ರ್ಯಾಪಿಡೋ ಚಾಲಕರನ್ನು ಜಯನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪೊಲೀಸರು ಸಾರಿಗೆ ಅಧಿಕಾರಿಗಳಿಂದ ಖಾಸಗಿ ವೈಟ್ ಬೋರ್ಡ್ ವಾಹನಗಳಿಗೆ ಈ ಸೇವೆ ಸಲ್ಲಿಸಲು ಅವಕಾಶವಿಲ್ಲವೆಂದು ತಿಳಿಸಿದಾಗ ಎರಡೂ ವಾಹನಗಳನ್ನೂ ಠಾಣಾಧಿಕಾರಿಗಳು ವಶಕ್ಕೆ ಪಡೆದು ಆಟೋ ಚಾಲಕರಿಗೆ ಲಿಖೀತ ದೂರು ನೀಡುವಂತೆ ಹೇಳಿ ಕಳಿಸಿದ್ದಾರೆ.
ನಗರದಲ್ಲಿ ರ್ಯಾಪಿಡೋ ವಾಹನಗಳಿಗೆ ಅನುಮತಿ ನೀಡಿದಲ್ಲಿ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಆರಂಭಿಸುವುದಾಗಿ ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.