![smg-palike](https://tungataranga.com/wp-content/uploads/2024/12/smg-palike.jpg)
ಹುಡುಕಾಟದ ವರದಿ 3
ಶಿವಮೊಗ್ಗ, ಫೆ.13:
ಮನೆ ಕಟ್ಟಲು ಅಥವಾ ಮನೆ ಮಾರಲು ಈ ಸ್ವತ್ತು ಕಡ್ಡಾಯ. ಅದರ ಪ್ರಕ್ರಿಯೆ ಅತ್ಯಂತ ಕ್ಲಿಷ್ಟವೇನಲ್ಲ. ಕೆಲವರ ಈ ಸ್ವತ್ತು ಒಂದೇ ಒಂದು ದಿನದಲ್ಲಿ ಸಿಕ್ಕಿಬಿಡುತ್ತವೆ. ಮತ್ತೆ ಕೆಲವರಿಗೆ ತಿಂಗಳು ವರ್ಷಗಟ್ಟಲೇ ಕಾಯಿಸುತ್ತವೆ ಯಾಕೆ ಗೊತ್ತಾ?
![](http://tungataranga.com/wp-content/uploads/2023/04/Screenshot_2023_0226_070755-1.jpg)
ಅದು ಮೊದಲು ಟಪಾಲ್ ವಿಭಾಗದಿಂದ ಕಂದಾಯವಿಭಾಗಕ್ಕೆ ಬರುತ್ತದೆ. ಅಲ್ಲಿಂದ ಬಿಲ್ ಕಲೆಕ್ಟರ್ ಪರಿಶೀಲಿಸಿ ಕೇಸ್ ವರ್ಕರ್ ಮೂಲಕ ಡಾಟಾ ಆಪರೇಟರ್ ಮೂಲಕ ಅವರವರ ಲಾಗಿನ್ ಗಳಲ್ಲಿ ಮುಂದುವರೆದು ರೆವೆನ್ಯೂ ಇನ್ಸ್ಪೆಕ್ಟರ್ ಗೆ ಬರುವಷ್ಟರಲ್ಲಿ ಪ್ರಭಾವಿ ಅಲ್ಲದವನು, ಶಿಫಾರಸ್ಸು ಇಲ್ಲದವನು, ಕೈಕಾಸು ಕೊಡದವನು ಸುಸ್ತಾಗಿ ಹೋಗುತ್ತಾನೆ. ಅಲ್ಲಿಂದ ಕಂದಾಯ ವಿಭಾಗದ ಆಯುಕ್ತರಿಗೆ ಬಂದರೆ ಅವರ ಕೆಲಸ ಮುಗಿದಂತೆ.
ಅಲ್ಲಿಗೆ ಬರುವಷ್ಟರಲ್ಲಿ ನಾನಾ ವಾದ ವಿವಾದ, ಮಾತುಕತೆ ಇನ್ನಿತರ ಎಲ್ಲಾ ನಡೆದಿರುತ್ತದೆ. ಇಲ್ಲಿ ಶಿಫಾರಸ್ಸು ಇಲ್ಲದವನು, ಹಣ ಚೆಲ್ಲದವನು ನಿತ್ಯ ಪಾಲಿಕೆಗೆ ಬಂದು ಹೋಗುವುದನ್ನೇ ಕಾಯಕ ಮಾಡಿಕೊಳ್ಳಬೇಕು.
![](http://tungataranga.com/wp-content/uploads/2025/02/IMG_20250125_140612-1.jpg)
ಯಾವುದಾದರೂ ತುರ್ತು ಕಾರ್ಯನಿಮಿತ್ತ ಅನಿವಾರ್ಯವಾಗಿ ಮನೆ ಮಾರಬೇಕೆಂದು ನಿಶ್ಚಯ ಮಾಡಿಕೊಂಡು ಮದುವೆ ಹಾಗೂ ಇತರೆ ಯಾವುದೇ ಸಮಾರಂಭ ಸಮಾರಂಭವನ್ನು ಆಯೋಜಿಸಿಕೊಂಡವರಿಗೆ ನಿಜಕ್ಕೂ ಇದು ಗ್ರಹಚಾರವೇ ಹೌದು.
ಇಂತಹದೊಂದು ಘಟನೆ ನಿನ್ನೆ ಮದ್ಯಾನ್ಹ ಒಂದು ಗಂಟೆ ಹೊತ್ತಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ದೊಡ್ಡ ಸದ್ದಿನೊಂದಿಗೆ ಸುದ್ದಿಯಾಗಿದ್ದು ಸುಳ್ಳೇನಲ್ಲ. ಶಿವಮೊಗ್ಗ ಒಂದನೇ ವಾರ್ಡ್ ನ ಮಹಿಳೆ ಒಬ್ಬರು ಪಾಲಿಕೆಯಲ್ಲಿ ಬೆಳಿಗ್ಗೆಯಿಂದ ಕಾಯುತ್ತಿದ್ದು ಮಧ್ಯಾಹ್ನದ ಹೊತ್ತಿಗೆ ಸಾಕಷ್ಟು ಸಿಡಿಮಿಡಿ ಗೊಂಡಿದ್ದಕ್ಕೆ ಕಾರಣವಿದೆ. ಅವರು ಈಗಾಗಲೇ ಮೂರು ಬಾರಿ ಅರ್ಜಿ ಕೊಟ್ಟಿದ್ದಾರೆ. ಟಪಾಲಿನಿಂದ ಡಾಟಾ ಎಂಟ್ರಿಯ ವರೆಗೆ ಅರ್ಜಿ ಹೋಗಿದೆ. ಅಲ್ಲಿ ಈಗ ಮತ್ತೆ ಕಳೆದುಹೋಗಿದೆಯಂತೆ. ದೂರದ ಪ್ರದೇಶದಿಂದ ಅಲ್ಲಿಗೆ ಬಂದು ಕಾಯುತ್ತಿದ್ದವರು ನೀವು ಹೊಸದಾಗಿ ಫೈಲ್ ಕೊಡಿ ಎಂದರೆ ಎಷ್ಟು ಸಿಟ್ಟು ಬರಬೇಕು ಹೇಳಿ?
![](http://tungataranga.com/wp-content/uploads/2025/02/IMG-20250205-WA0022.jpg)
ಪದೇ ಪದೇ ಪಾಲಿಕೆಗೆ ಬಂದು ನಮ್ಮ ಈ ಸ್ವತ್ತು ಎಂದು ಕೇಳಿ ಸಂಜೆವರೆಗೆ ಕಾದು ಮನೆಗೆ ಹೋದವರಿಗೆ ಈಗ ಮತ್ತೆ ಫೈಲ್ ಕೊಡಿ ಕೇಳಿದಾಗ ಎಷ್ಟರಮಟ್ಟಿಗೆ ಸಿಟ್ಟು ಬರಬೇಕು? ಕೂಗಾಡಿದ್ದಾರೆ ಆಗ ಅಲ್ಲಿನ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆಯನ್ನು ಪರಿಶೀಲಿಸಿ, ಈ ಸ್ವತ್ತು ಮಾಡಿಕೊಳ್ಳಲು ಅಗತ್ಯವಿರುವ ಇನ್ನಷ್ಟು ದಾಖಲೆಗಳನ್ನು ತಂದು ಕೊಡುವಂತೆ ಹೇಳಿ ಕೆಲಸ ಮಾಡಿಸಿ ಕೊಟ್ಟಿದ್ದಾರೆ.
ಇಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ಅದರಲ್ಲೂ ವಿಶೇಷವಾಗಿ ಡಾಟಾ ಆಪರೇಟರ್ ಗಳು ನಾನಾ ನಮೂನೆಯ ಆಟವಾಡುತ್ತಾರೆ ಎಂಬುದು ಸಾರ್ವಜನಿಕ ಆರೋಪ. ಏಕೆಂದರೆ ಒಂದು ಕಂಪ್ಯೂಟರ್ ನಿಂದ ಇನ್ನೊಂದೆಡೆ ಲಾಗಿನ್ ಆಗಲು ಸತಾಯಿಸುವವರ ಸಂಖ್ಯೆ ಹೆಚ್ಚಾಗಿದೆ.
ಬ್ರೋಕರ್ ಗಳ ಕಾರುಬಾರು:
ಈ ಸ್ವತ್ತು ಮಾಡಿಕೊಡುವ ವಿಷಯಕ್ಕೆ ಸಂಬಂಧಪಟ್ಟಂತೆ ಬ್ರೋಕರ್ ಗಳ ಕಾರುಬಾರು ಶಿವಮೊಗ್ಗ ಪಾಲಿಕೆಯಲ್ಲಿ ಹೆಚ್ಚಾಗಿದೆ ಎಂಬ ಆರೋಪ ಗಂಭೀರವಾಗಿ ಕೇಳಿ ಬಂದಿದೆ. ಇಲ್ಲಿ ಕೆಲಸ ಮಾಡುವವರ ಸಂಬಂಧಿಕರೇ ಬ್ರೋಕರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದರ ವಿವರ, ಇನ್ನಷ್ಟು ಮಾಹಿತಿಗಳ ಹುಡುಕಾಟ ಪತ್ರಿಕೆಯದು.
ತಪ್ಪು ಮುದ್ರಿಸಿ ಸತಾಯಿಸುವವರ ಇನ್ನಷ್ಟು ನಿರಂತರ ಕಥನಗಳಿವೆ. ಅದೇ ಒಂದು ದಾರವಾಹಿಯಾದೀತು.
ನಿತ್ಯ ಕನಿಷ್ಟ 16 ಫೈಲ್ ಗಳನ್ನು ಮಾಡಬೇಕೆಂಬ ಕರಾರು ಮಾಯವಾಗಿದೆ. ಬಿಲ್ ಕಲೆಕ್ಟರ್ ಮನೆ ಪರಿಶೀಲಿಸಿ ಸಾಕ್ಷಿಗಳ ಸಮ್ಮುಖದಲ್ಲಿ ದಾಖಲೆ ಸಿದ್ದವಾಗುತ್ತಿದೆಯೇ? ಬಹಳಷ್ಟು ಬಿಲ್ ಕಲೆಕ್ಟರ್ ಹೋಗುವುದೇ ಇಲ್ಲ., ಹೇಳಿದ್ದನ್ನು ಬರೆದುಕೊಟ್ಟು ಬೆಚ್ಚಗಾಗುತ್ತಾರಂತೆ…,