ಸಾಗರ : ಎ.ಟಿ.ಎಂ.ಗಳಲ್ಲಿ ಹಣ ಡ್ರಾ ಮಾಡಿ ಜನರನ್ನು ವಂಚಿಸುತ್ತಿದ್ದ ಅಂತರಾಜ್ಯರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಎ.ಟಿ.ಎಂ.ಗಳಲ್ಲಿ ಹಣ ಡ್ರಾ ಮಾಡಲು ಬಂದವರನ್ನು ವಂಚಿಸಿ ಅವರ ಕಾರ್ಡನ್ನು ಉಪಾಯವಾಗಿ ಬದಲಾಯಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಕಳೆದ ವರ್ಷ ಅಕ್ಟೋಬರ್ ೫ರಂದು ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣ ವಿತ್ಡ್ರಾ ಮಾಡಲು ಬಂದ ವ್ಯಕ್ತಿಯೊಬ್ಬರನ್ನು ವಂಚಿಸಿ ಅವರ ಎಟಿಎಂ ಕಾರ್ಡ್ ಬದಲಾಯಿಸಿ ತಾಳಗುಪ್ಪ ವ್ಯಾಪ್ತಿಯ ಎಸ್ಬಿಐ ಬ್ಯಾಂಕ್ ಎಂಟಿಎಂನಿಂದ ೧೪೯೯೯೯ ಹಣವನ್ನು ಡ್ರಾ ಮಾಡಲಾಗಿತ್ತು. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಎಟಿಎಂನಲ್ಲಿ ಅಕ್ರಮವಾಗಿ ಹಣ ಡ್ರಾ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹರಿಯಾಣ ರಾಜ್ಯದ ವಾಸಿ ಜೋಗಿನ್ದಾರ್ ಮತ್ತು ಮುಖೇಶ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಎಟಿಎಂನಿಂದ ೯೫ಸಾವಿರ ರೂ. ವಿತ್ಡ್ರಾ ಮಾಡಿರುವ ಪ್ರಕರಣವೂ ಬಯಲಿಗೆ ಬಂದಿದೆ.
ಬಂಧಿತರಿಂದ ತಾಳಗುಪ್ಪ ಎ.ಟಿ.ಎಂ. ಹಣ ಡ್ರಾ ಮಾಡಿದ್ದ ರೂ. ೬೦ಸಾವಿರ, ಶಿರಾಳಕೊಪ್ಪದಲ್ಲಿ ಡ್ರಾ ಮಾಡಿದ್ದ ೪೦ಸಾವಿರ ರೂ. ಹಾಗೂ ೨ಲಕ್ಷ ರೂ. ಮೌಲ್ಯದ ರಾಯಲ್ ಎನ್ಫಿಲ್ಡ್ ಬೈಕ್ ವಶಪಡಿಸಿಕೊಂಡು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೇಟೆ ಠಾಣೆ ವೃತ್ತ ನಿರೀಕ್ಷಕ ಪುಲ್ಲಯ್ಯ ರಾಠೋಡ್, ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ, ಪಿಎಸ್ಐಗಳಾದ ಯಲ್ಲಪ್ಪ, ಹೊಳೆಬಸಪ್ಪ, ಸಿಬ್ಬಂದಿಗಳಾದ ಸನಾವುಲ್ಲಾ, ವಿಕಾಸ್, ವಿಶ್ವನಾಥ್, ಕೃಷ್ಣಮೂರ್ತಿ, ಮೆಹಬೂಬ್, ಶಂಕರ್ ಇನ್ನಿತರರು ಪಾಲ್ಗೊಂಡಿದ್ದರು.
ದೇವಿಯ ಮಾಂಗಲ್ಯ ಸರ ವಶಕ್ಕೆ : ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ದೇವಿಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಳ್ಳತನಕ್ಕೆ ಸಂಬಂಧಪಟ್ಟಂತೆ ನಗರ ಠಾಣೆ ಪೊಲೀಸರು ಎರಡೆ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆ. ೮ರಂದು ಬೆಳಿಗ್ಗೆ ದೇವಸ್ಥಾನದ ಅರ್ಚಕ ಭರತ್ ಭಟ್ ಪೂಜೆ ಮುಗಿಸಿ ಟೀ ಕುಡಿಯಲು ಹೋಗಿದ್ದಾಗ ಯಾರೋ ಕಳ್ಳರು ದೇವಿಯ ಕುತ್ತಿಗೆಯಲ್ಲಿದ್ದ ಸುಮಾರು ೩೦ ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೆ. ೧೧ರಂದು ತನಿಖಾ ತಂಡವು ಶಿರವಂತೆ ಗ್ರಾಮದ ಶಿವಕುಮಾರ್ ಎಂಬಾತನನ್ನು ದಸ್ತಗಿರಿ ಮಾಡಿ ಆತನಿಂದ ಸುಮಾರು ೬೯೭೨೮ ರೂ. ಮೌಲ್ಯದ ಮಾಂಗಲ್ಯ ಸರವನ್ನು ವಶಕ್ಕೆ ಪಡೆಯಲಾಗಿದೆ.