ದಾವಣಗೆರೆ: ಖಾಸಗಿ ವಸತಿ ನಿಲಯದಲ್ಲಿ ಬಾಯ್ಲರ್ ಡ್ರಮ್ ಮುರಿದು ಬಿದ್ದ ಪರಿಣಾಮ ಬಾಲಕ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಖಾಸಗಿ ವಸತಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ರಂಗನಾಥ್ (9) ಮೃತಪಟ್ಟ ವಿದ್ಯಾರ್ಥಿ. ಮೂಲತಃ ಹರಿಹರ ತಾಲೂಕಿನ ಜಿಗಳಿ ಗ್ರಾಮದ ರಂಗನಾಥ್ ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಖಾಸಗಿ ವಸತಿ ಶಾಲೆಯ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಸೋಮವಾರದಂದು ಟೆರಸ್ ಮೇಲಿದ್ದ ಬಾಯ್ಲರ್ ಡ್ರಮ್ ಮುರಿದು ಬಿದ್ದು ಗಾಯಗೊಂಡಿದ್ದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಂಗನಾಥ್ ಮಂಗಳವಾರ ಮೃತಪಟ್ಟಿದ್ದಾನೆ. ರಂಗನಾಥ್ ಪೋಷಕರು ವಸತಿಯುತ ಶಾಲೆ ವಾರ್ಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಲಯದ ವಾರ್ಡನ್ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ. ಪುತ್ರ ಗಾಯಗೊಂಡಿರುವ ವಿಷಯವನ್ನು ಪೋಷಕರಿಗೂ ತಿಳಿಸಿಲ್ಲ ಎಂದು ದೂರಿ ಪೋಷಕರು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.