
ಫೆ 5 : ಶಿವಮೊಗ್ಗ ಸಂಸ್ಕೃತಿ ಹಾಗೂ ಕಲೆಗಳ ತವರೂರು ಇಂತಹ ತವರೂರಿನಲ್ಲಿ ಜನಿಸಿದ ನಾವು ಪುಣ್ಯವಂತರು. ಈ ತಾಯಿಯ ಅಂಗಳದಲ್ಲಿ ನಾವುಗಳು ಕೇವಲ ಅಂಕಗಳಿಗೋಸ್ಕರ ಓದುವುದು ಬೇಡ, ಅದರ ಜೊತೆಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವನ್ನು ಹೊಂದುವುದು ಮುಖ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಅವರು ಶಿವಮೊಗ್ಗ ಗುರುಪುರ ಹೊರ ವಲಯದ ಬಿಜಿಎಸ್ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ನಮಗೆ ನಮ್ಮ ಗುರುಗಳು ಯಾವತ್ತೂ ಭಿಕ್ಷೆ ಎತ್ತುವುದನ್ನು ಬಿಡಬೇಡಿ ಜನಸೇವೆಗೆ ಅದರಿಂದ ಸಹಾಯ ಮಾಡಿ ಉಳ್ಳವರ ಕೈಯಿಂದ ಪಡೆದು ಅಶಕ್ತರ, ದುರ್ಬಲರ ಬದುಕಿಗೆ ದಾರಿ ದೀಪವಾಗುವಂತಹ ಕೆಲಸವನ್ನು ಮಾಡಿ,ಈ ಹಿನ್ನೆಲೆಯಲ್ಲಿ ಜ್ಞಾನದಾಸೋಹ, ಅನ್ನದಾಸೋಹವನ್ನ ಮಕ್ಕಳಿಗೆ ಹಾಗೂ ಜನರಿಗೆ ನೀಡುವ ಮೂಲಕ ಸಮಾಜದ ಒಳಿತಿಗೆ,ಸಂಸ್ಕೃತಿಯ ಒಳಿತಿಗೆ ಕೆಲಸ ಮಾಡಲು ನಿರ್ಧರಿಸಿ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಹತ್ತಾರು ಮಹತ್ತರ ಸಾಮಾಜಿಕ ಕಾರ್ಯಕ್ರಮಗಳನ್ನ ನಡೆಸುತ್ತಾ ಬಂದಿದೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಡಿಯಲ್ಲಿ ಅಂದರ,ಕಿವುಡರ ಬದುಕಿಗೆ ದಾರಿದೀಪವಾಗುವಂತಹ ಶಾಲೆಗಳನ್ನು ತೆರೆದಿದೆ.ವೃದ್ಯಾಪ್ಯದಲ್ಲಿ ಅವರನ್ನು ಅನಾಥರನ್ನಾಗಿಸುವ ಮಕ್ಕಳ ಸ್ಥಿತಿಯನ್ನು ಅವಲೋಕಿಸಿದಾಗ ನಿಜಕ್ಕೂ ಬೇಸರವಾಗುತ್ತದೆ.ಈ ಹಿನ್ನೆಲೆಯಲ್ಲಿ ನಾವು ಗುರು ಹಿರಿಯರನ್ನ ಪೂಜ್ಯ ತಂದೆ-ತಾಯಿಯರನ್ನ ಗೌರವಿಸುವ ಪಾಠ ಕಲಿಯಬೇಕಿದೆ.
ಮಕ್ಕಳು ಕನಿಷ್ಠಪಕ್ಷ ದಿನಕ್ಕೊಮ್ಮೆಯಾದರೂ ಹಿರಿಯರನ್ನ, ಹೆತ್ತವರನ್ನು ಗೌರವಿಸುವುದನ್ನು, ನಮಸ್ಕರಿಸುವುದನ್ನು ಕಲಿಯಿರಿ, ಚೆನ್ನಾಗಿ ಓದಿ,ಸೋಮಾರಿತನ ಬಿಡಿ ಸಂಸ್ಕೃತಿ ಅರಿವು ನಿಮಗಿರಲಿ ಮಕ್ಕಳಿಗೆ ಕಿವಿಮಾತು ಹೇಳಿದರು.
ಶಿವಮೊಗ್ಗ ಶಾಸಕರಾದ ಎಸ್. ಎನ್.ಚನ್ನಬಸಪ್ಪ ಅವರು ಮಾತನಾಡುತ್ತಾ,ಗುರುಗಳಿದ್ದಾಗ ಮಾತ್ರ ಗುರಿ ತಲುಪಲು ಸಾಧ್ಯ,ನಮ್ಮ ಧರ್ಮ ಒಂದು ಮಹತ್ತರ ಮೈಲಿಗಲ್ಲನ್ನು ತಲುಪಿದೆ ಎಂದು ತಿಳಿಸಿದರು.

ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 450ಕ್ಕೂ ಹೆಚ್ಚು ಎಲ್ಲಾ ಬಗೆಯ ಶಾಲಾ ಕಾಲೇಜುಗಳನ್ನು ನಡೆಸುತ್ತಿದ್ದು, ಸುಮಾರು ಒಂದು ಲಕ್ಷ ನಲವತ್ತು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಸರ್ಕಾರ ಮಾಡಬೇಕಾದ ಕಾರ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಹಾಗೂ ಗುರುಗಳು ಮಾಡುತ್ತಿದ್ದಾರೆ. ನಿಜಕ್ಕೂ ಈ ವಿಷಯದಲ್ಲಿ ನಾವು ಧನ್ಯರು ಎಂದರು.
ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ನಿರ್ದೇಶಕರಗಳು, ಪ್ರಾಂಶುಪಾಲರು, ಸಿಬ್ಬಂದಿಯ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಶಾಲಾ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೂಜ್ಯರಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಕೊನೆಯಲ್ಲಿ ಬಿಜಿಎಸ್ ಕಲಾ ಸಂಭ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಇಂದಿನ ಆನ್ಲೈನ್ ಯುಗದಲ್ಲಿ ತಂದೆ ತಾಯಿಯರು ಅನಾಥರಾಗುತ್ತಿದ್ದಾರೆ. ಹಿರಿಯರು ನಿಜಕ್ಕೂ ವ್ಯವಸ್ಥೆಯಿಂದ ದೂರವಾಗುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಹಣ ಇಟ್ಟುಕೊಂಡಿದ್ದರು, ಮಕ್ಕಳು ದೂರದ ಎಲ್ಲೋ ಕೆಲಸಕ್ಕೆ ಎಂದು ಹೋಗಿರುತ್ತಾರೆ.ಆನ್ಲೈನ್ ವ್ಯವಸ್ಥೆಯಲ್ಲಿ ಗ್ಯಾಸ್,ನೀರು,ಊಟ, ಆಸ್ಪತ್ರೆ ಇತ್ಯಾದಿ ವ್ಯವಸ್ಥೆಯನ್ನು ಮಾಡುವಂತಹ ಈ ವ್ಯವಸ್ಥೆ ಹಿರಿಯರನ್ನು ಪ್ರೀತಿಯಿಂದ ವಂಚಿತರನ್ನಾಗಿ ಮಾಡಿದೆ.ಕೊರೋನಾ ಸಂದರ್ಭದಲ್ಲಿ ನಾವು ಸುಮಾರು 185ಕ್ಕೂ ಹೆಚ್ಚು ಶವಗಳನ್ನ ಅಂತ್ಯ ಸಂಸ್ಕಾರ ಮಾಡಿದವು, ಅದರಲ್ಲಿ 170ಕ್ಕೂ ಹೆಚ್ಚು ಶವಗಳನ್ನು ಅಂತ್ಯಸಂಸ್ಕಾರ ಮಾಡುವಾಗ ಅವರ ಕುಟುಂಬದ ಒಬ್ಬರು ಕಾಣಲಿಲ್ಲ, ನಿಜಕ್ಕೂ ದುಃಖವಾಯಿತು. ಕನಿಷ್ಠ ಪಕ್ಷ ಸಾವು ಕಂಡಾಗ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳದೆ ಇದ್ದದ್ದನ್ನು ಗಮನಿಸಿದರೇ,ಪ್ರೀತಿ ವಿಶ್ವಾಸ ನಂಬಿಕೆ ಇವರಲ್ಲಿ ಹೇಗೆ ತಾನೇ ಮೂಡಲು ಸಾಧ್ಯ. ಇಡೀ ಪ್ರಪಂಚ ಭಾರತದ ಸಂಸ್ಕೃತಿಯನ್ನು ಮೆಚ್ಚಿಕೊಂಡಿದೆ ಆದರೆ ನಾವು ಸಂಸ್ಕೃತಿಯನ್ನೇ ಮರೆಯುವ ಹಂತಕ್ಕೆ ಹೋಗಿದ್ದೇವೆ. ಹಾಗಾಗಿ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಗುರುಹಿರಿಯರನ್ನು ಗೌರವಿಸುವ,ರಕ್ಷಿಸುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಮರೆಯದಿರಿ. ನಾಗೇಂದ್ರ ಡಿ. ಕಂದಾಯ ವಿಭಾಗದ ಆಯುಕ್ತರು ಶಿವಮೊಗ್ಗ ಮಹಾನಗರ ಪಾಲಿಕೆ.