ಶಿವಮೊಗ್ಗ ಜ.18:: ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಶಾಶ್ವತ ಡಿಜಿ ದಾಖಲೆಗಳಾಗಿ ಪರವರ್ತಿಸಿ, ಜನರ ಅನುಕೂಲಕ್ಕೆ ಅಗತ್ಯಗನುಗುಣವಾಗಿ ಒದಗಿಸಲು ಭೂ ಸುರಕ್ಷಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಶಿವಮೊಗ್ಗ ತಹಶೀಲ್ದಾರರ ಕಚೇರಿಯಲ್ಲಿ ಭೂಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ದಾಖಲೆಗಳಿಗಾಗಿ ಬರುವ ಆಸ್ತಿಗಳ ಮಾಲೀಕರು ಸಂಬಂಧಿಸಿದ ಇಲಾಖೆಗಳ ದಾಖಲೆಗಳ ಸಂಗ್ರಹಾಲಯದಿಂದ ಪಡೆದುಕೊಳ್ಳಲು ಇರುವ ತೊಂದರೆ ಈ ಯೋಜನೆಯ ವ್ಯವಸ್ಥಿತ ಅನುಷ್ಟಾನದಿಂದ ನಿವಾರಣೆಗೊಳ್ಳಲಿದೆ ಎಂದ ಅವರು, ಹಳೆಯ ದಾಖಲೆಗಳ ಸಂರಕ್ಷಣೆಯಿಂದಾಗಿ ದಾಖಲೆಗಳ ತಿದ್ದುಪಡಿ, ಕಳುವು ಅಸಾಧ್ಯವಾಗಲಿದೆ ಎಂದರು.
ಆಸಕ್ತ ಭೂಮಿಯ ಮಾಲೀಕರು ತಮ್ಮ ಭೂದಾಖಲೆಗಳನ್ನು ನೇರವಾಗಿ ಡಿಜಿಟಲ್ ಮಾಧ್ಯಮದಿಂದ ಪಡೆದುಕೊಳ್ಳಲು ಸಾದ್ಯವಾಗಲಿದೆ. ಇಂತಹ ಮಹತ್ವದ ಯೋಜನೆಯಡಿ ಜನಸಾಮಾನ್ಯರಿಗೆ ಯಾವುದೇ ಮದ್ಯವರ್ತಿಗಳಿಲ್ಲದೆ, ಕಚೇರಿಗಳಿಗೆ ಅಲೆದಾಟವಿಲ್ಲದೇ, ವಿಳಂಬಕ್ಕೆ, ಅಡೆತಡೆಗೆ ಅವಕಾಶವಿಲ್ಲದೇ ಭೂಸುರಕ್ಷಾ ಯೋಜನೆಯಡಿ ದಾಖಲೆಗಳನ್ನು ತ್ವರಿತವಾಗಿ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ಆಡಳಿತಕ್ಕೆ ಡಿ.ಜಿ.ಸ್ಪರ್ಶ ನೀಡುವುದರಿಂದ ಉತ್ತಮ ಜನಪರ ಆಡಳಿತ ನೀಡಲಾಗುತ್ತಿದೆ ಅಲ್ಲದೇ ಭೂಮಾಲೀಕರ ಒಡೆತನಕ್ಕೆ ಗ್ಯಾರೆಂಟಿ ನೀಡಲಾಗುತ್ತಿದೆ ಎಂದರು.
ಹಳೆಯ ದಾಖಲೆಗಳನ್ನು ರಕ್ಷಿಸುವುದರ ಜೊತೆಗೆ ನಕಲಿ ಭೂ ದಾಖಲೆಗಳು ಸೃಷ್ಠಿಯಾಗುವುದನ್ನು ತಪ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ದಾಖಲೆಗಳು ಡಿಜಿಟಲ್ ರೂಪದಲ್ಲಿದ್ದರೆ ಅವುಗಳ ಆಯಸ್ಸು ಹೆಚ್ಚಾಗಿರುತ್ತದೆ ಅಲ್ಲದೇ ಕಾಗದ ರೂಪದಲ್ಲಿರುವ ಭೂ ದಾಖಲೆಗಳಿಗೆ ಹಾನಿಯಾಗುವ ಅಪಾಯ ಹೆಚ್ಚಿರುತ್ತದೆ. ಈ ಯೋಜನೆಯ ಅನುಷ್ಠಾನದಿಂದಾಗಿ ಆಸ್ತಿಗಳ ಮಾಲೀಕರು ತಮ್ಮ ದಾಖಲೆಗಳನ್ನು ಅಗತ್ಯಕ್ಕೆ ತಕ್ಕಂತೆ ಸುಲಭವಾಗಿ ಸರಳವಾಗಿ ಪಡೆದುಕೊಳ್ಳಬಹುದಾಗಿದೆ. ದಾಖಲೆಗಳಿಗಾಗಿ ಯಾವುದೇ ಕಚೇರಿಗೆ ಅಲೆದಾಡಬೇಕಾದ ಅಗತ್ಯವಿಲ್ಲ. ಇದರಿಂದಾಗಿ ಜನರಿಗೆ ಪ್ರಯಾಣ ಹಣ ಮತ್ತು ಸಮಯದ ಉಳಿತಾಯವಾಗಲಿದೆ ಎಂದವರು ನುಡಿದರು.
ಭವಿಷ್ಯದ ದಿನಗಳಲ್ಲಿ ವಿವಿಧ ಇಲಾಖಾ ವಿಭಾಗಗಳ ಡಿಜಿಟಲೀಕರಣಕ್ಕೂ ಈ ಯೋಜನೆಯು ನೆರವಿಗೆ ಬರುವ ನಿರೀಕ್ಷೆ ಇದೆ ಎಂದ ಅವರು, ಪ್ರಸ್ತುತ ಸಂದರ್ಭದಲ್ಲಿ ರಾಜ್ಯದ ಎಲ್ಲಾ ತಾಲೂಕು ಕಚೇರಿ, ಸರ್ವೇ ಕಚೇರಿ ಮತ್ತು ಉಪನೋಂದಣಾಧಿಕಾರಿಗಳಲ್ಲಿರುವ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.
ಆಸ್ತಿ ದಾಖಲೆಗಳನ್ನು ಪಡೆಯಲು ನಾಗರೀಕರು ಎದುರಿಸುತ್ತಿರುವ ಸಮಸ್ಯೆ-ಸವಾಲುಗಳನ್ನು ಇತ್ಯರ್ಥಗೊಳಿಸಿ, ದಾಖಲೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿಯಾಗಲಿದೆ. ರಾಜ್ಯದ ವಿವಿಧ ತಾಲೂಕು ಕಚೇರಿಗಳಲ್ಲಿರುವ ಅತ್ಯಂತ ಪ್ರಮುಖವಾದ, ಸ್ವಾತಂತ್ರ್ಯಪೂರ್ವ ಮತ್ತು ನಂತರದ ಹಳೆಯ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯಕ್ಕೆ ಕಳೆದ ಸಾಲಿನಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಎರಡನೇ ಹಂತಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಒಂದು ವರ್ಷದೊಳಗಾಗಿ ಎಲ್ಲಾ ದಾಖಲೆಗಳ ಗಣಕೀಕರಣ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ್ ,ತಹಶೀಲ್ದಾರ್ .ರಾಜೀವ್ ವಿ.ಎಸ್. ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.