ಎಸ್.ಕೆ. ಗಜೇಂದ್ರ ಸ್ವಾಮಿ, ಶಿವಮೊಗ್ಗ
(ಮೂಲ: ಅರಹತೋಳಲು, ಭದ್ರಾವತಿ)
ವಾರದ ಅಂಕಣ- 29
ಬದುಕಿನ ಅನಿವಾರ್ಯತೆಗಳಿಗೋಸ್ಕರ ಕೊಡುಕೊಳ್ಳುವಿಕೆ ಎಲ್ಲರ ನಡುವೆ ಅನಿವಾರ್ಯ ಹಾಗೂ ಅತ್ಯವಶ್ಯಕ. ಹಾಗೆಯೇ ಅಂದಿನ ಬದುಕಿಗೆ, ಅಗತ್ಯದ ಅಂದಿನ ಜವಾಬ್ದಾರಿಗೆ ಸಾಲ ಮಾಡುವುದು ವಾಸ್ತವ. ಹಾಗೆಯೇ ಕೊಡುವುದು ಸಹ ಅಷ್ಟೇ ಪ್ರಮುಖವಾದ ಅಂಶವಾಗಿದೆ. ಸಾಲ ಕೊಡುವುದು ನಾನಾ ಬಗೆಯಲ್ಲಿ ಒಂದು ಕಡೆ ಕಂಡರೆ, ಮತ್ತೊಂದು ಕಡೆ ಸಾಲ ಪಡೆಯುವವನು ಸಹ ಭಿನ್ನ ವಿಭಿನ್ನವಾಗಿ ಯೋಚಿಸುತ್ತಾನೆ. ಈ ಹಿನ್ನೆಲೆಯಲ್ಲಿ ಸಾಲ ಪಡೆದವನು ಏನೇನೆಲ್ಲ ಮಾಡುತ್ತಾನೆ? ಅದರಲ್ಲಿನ ಕೆಲವೇ ಕೆಲವು ವಿಕೃತ ಮನಸ್ಸುಗಳು ಸಮಾಜ ಬಾಹಿರ ಚಟುವಟಿಕೆಗಳಲ್ಲಿ ಮಗ್ನವಾಗಿ ಎತ್ತುವಳಿ ದಂಧೆಯ ಮೂಲಕ ತನ್ನನ್ನು ತಾನು ಬೆಳೆಸಿಕೊಳ್ಳಲು ಯತ್ನಿಸುತ್ತಾನೆ.,ಕೊಡುವುದನ್ನೆ ಮರೆತು ನಂತರ ಅವನೇ ವಿಕೃತತೆಗೆ ಒಳಗಾಗುತ್ತಾನೆ ಎಂಬುದೇ ಈ ವಾರದ “ಮಾಡಿರೋ ಸಾಲ ತೀರಿಸೋಕೆ ಹಲ್ಕಾ ಕೆಲ್ಸಕ್ಕಿಳಿಬ್ಯಾಡ್ರಿ” ಎಂಬ ಮಾಹಿತಿ ಹೊತ್ತ ನೆಗಿಟೀವ್ ಥಿಂಕಿಂಗ್ ಅಂಕಣ.
ದೊಡ್ಡ ಅಥವಾ ಸಣ್ಣ ಯಾವುದೇ ವ್ಯವಹಾರದಲ್ಲಿ ಒಂದಿಷ್ಟು ಬಗೆಯ ವಿಚಾರಗಳು, ನಂಬಿಕೆಗಳು, ಪ್ರೀತಿ ಹಾಗೂ ವ್ಯಕ್ತಿತ್ವ ಅಡಗಿರುತ್ತದೆ. ಆದರೆ, ಕೆಲವು ವಿಚಿತ್ರ ಮನಸುಗಳು ಪಡೆದ ಸಾಲವನ್ನು ತೀರಿಸಲು ಮತ್ತೊಂದು ಬಗೆಯ ಹೊಸ ಹೊಸ ಪ್ರಯತ್ನಗಳಿಗೆ ಸಮಾಜಭಾಹಿರ ಚಟುವಟಿಕೆಗಳಿಗೆ ಕೈ ಹಾಕುತ್ತದೆ. ಹಾಗೆಯೇ ಆ ಮನಸ್ಸು ಕೊಡುವುದನ್ನೇ ಮರೆತು ಅದನ್ನೇ ಕಸುಬಾಗಿ ಮಾಡಿಕೊಂಡು ತನ್ನ ಬೇಳೆಕಾಳು ಬೇಯಿಸಿಕೊಳ್ಳಲು ಯತ್ನಿಸುತ್ತದೆ. ಎಷ್ಟು ದಿನದ ಮಟ್ಟಿಗೆ ಇದು ಸಸೂತ್ರವಾಗಿ ನಡೆಯಲು ಸಾಧ್ಯ ಎಂಬುದು ಇಲ್ಲಿ ಚಿಂತನಾರ್ಹ ವಿಷಯವಲ್ಲವೇ?
ಪಡೆದ ಸಾಲವನ್ನು ಅಥವಾ ಕೈಗಡವನ್ನು ಹೇಗಾದರೂ ಮಾಡಿ ವಾಪಾಸ್ ಕೊಡಬೇಕೆಂಬ ಮುಗ್ಧ ಮನಸ್ಸು ಬಹಳಷ್ಟು ಜನರಲ್ಲಿ ಇರುತ್ತದೆ. ಅದರಲ್ಲಿ ಕೆಲವರು ಆ ಸಾಲ ತೀರಿಸಲು ದುಡಿಮೆಯ ಮಾರ್ಗ ಬಿಟ್ಟು ಅನ್ಯ ಮಾರ್ಗಗಳ ಮೂಲಕ ಕಾಸು ಪಡೆಯಲು ಯತ್ನಿಸುವುದನ್ನು ನಾವು ಈಗಾಗಲೇ ಕಂಡಿದ್ದೇವೆ, ಕಾಣುತ್ತಿದ್ದೇವೆ. ಆದರೆ ಅವರ ಕೊನೆಯ ಹಂತ ತೀರಾ ವಿಚಿತ್ರವಾಗಿ ಮುಕ್ತಾಯಗೊಳ್ಳುತ್ತದೆಯಲ್ಲವೇ? ಬೀದಿಯ ಬದಿಯಲ್ಲಿ ಬಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂಬುದು ನಮ್ಮ ನಡುವಿನ ಸಮಾಜದ ಮಾತಲ್ಲವೇ?
ಇಲ್ಲಿ ಸಾಲ ತೀರಿಸಲು ಹಲವಾರು ಸೂಕ್ತ ಮಾರ್ಗಗಳು ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಅವರು ಹೇಳಿದ ಒಂದಿಷ್ಟು ವಾಕ್ಯಗಳು ನೆನಪಾಗುತ್ತವೆ. ಬದುಕಿನ ಅನಿವಾರ್ಯತೆಗೆ ಪಡೆಯುವ ಸಾಲಕ್ಕೆ ನಾವು ಜವಾಬ್ದಾರರಾಗಿರಬೇಕು. ಅದನ್ನು ತೀರಿಸಲು ನಮ್ಮ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು. ಹೆಚ್ಚಿನ ಸಮಯ ದುಡಿಮೆ ನಮ್ಮದಾಗಿರಬೇಕು. ಅದರ ಜೊತೆಗೆ ಪ್ರೀತಿ, ವಿಶ್ವಾಸದಿಂದ ಸಮಾಜದ ಎಲ್ಲ ಮುಖವಾಣಿಗಳಿಗೆ ಸ್ಪಂದಿಸುತ್ತಾ ಕೊಡುವುದನ್ನು ಕೊಡುತ್ತಾ ಬಂದರೆ ಈ ಜಗದಲ್ಲಿ ಯಾವುದೇ ಗಲಾಟೆ, ಗದ್ದಲ ನಡೆಯುವುದಿಲ್ಲ. ಆದರೆ ಇಂತಹ ಸಾಲ ಪಡೆದ ಕೆಲವರು ಹೊಸ ದಾರಿ ಹುಡುಕುತ್ತಾರೆ. ಹೊಸ ಬಗೆಯ ಹಣ ಗಳಿಕೆಗೆ ಮುಂದಾಗುತ್ತಾರೆ ಅದು ಎಷ್ಟು ದಿನದ ಮಟ್ಟಿಗೆ ನಡೆಯುತ್ತದೆ?
ಅಂತಹವರು ಈ ಹೊಸ ಗಳಿಕೆಯ ಹಣ ಬರುತ್ತಾ ಹೋದಂತೆ ಕೊಡುವುದನ್ನೇ ಮರೆತು ಅಹಂನಲ್ಲಿ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಮುಂದೊಂದು ದಿನ ಅದು ತಿರುಗಿ ನಮ್ಮನ್ನೇ ಬಡಿಯುತ್ತದೆ ಎಂಬುದು ಅವರ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ ಅಲ್ಲವೇ?
ಮನೆ ಕಟ್ಟಲು, ಆಸ್ತಿಕೊಳ್ಳಲು, ಮಕ್ಕಳ ಓದಿಗಾಗಿಯೋ, ಆಸ್ಪತ್ರೆಯ ಖರ್ಚಿಗಾಗಿಯೂ ಅನಿವಾರ್ಯವಾಗಿ ಇನ್ನೊಬ್ಬರ ಬಳಿ ಕೈ ಚಾಚುವ ಪರಿಸ್ಥಿತಿ ಎಂತಹ ಕೋಟ್ಯಾಧೀಶರಾದರೂ ಅವನಿಗೆ ಬಂದೇ ಬರುತ್ತದೆ. ಲಕ್ಷ್ಮಿ ಎಂಬುದು ಯಾರೋ ಒಬ್ಬರು ಕೂಡಿಟ್ಟುಕೊಂಡ ಅಥವಾ ಬಚ್ಚಿಟ್ಟುಕೊಂಡ ವಸ್ತುವಲ್ಲ. ಅದೊಂದು ನಮ್ಮ ನಡುವೆ ಸಮಾಜದ ಜೀವ ಆಗಿದೆ. ಅದನ್ನು ಗೌರವಿಸಬೇಕು, ನಿಯತ್ತು ಇರಬೇಕು. ಪಡೆದ ಯಾವುದನ್ನೇ ಆಗಲಿ ಕೊಡಲು ಅನಿವಾರ್ಯವಾಗಿ ಸೂಕ್ತ ಮಾರ್ಗಗಳ ಮೂಲಕ ತಮ್ಮ ತಮ್ಮ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿಕೊಂಡು, ಒಂದಿಷ್ಟು ದಿನವನ್ನು ನಿಗದಿಪಡಿಸಿಕೊಳ್ಳಿ. ಇಷ್ಟರೊಳಗೆ ಸಾಲ ತೀರಿಸುತ್ತೇನೆ ಅಥವಾ ಪಡೆದದ್ದನ್ನು ಕೊಡುತ್ತೇನೆ ಎಂದುಕೊಳ್ಳಿ. ಅಂತಹ ಗುರಿಯೊಂದಿಗೆ ಸಾಲ ತೀರಿಸಲು ಮುಂದಾದರೆ ಎಲ್ಲರ ಬದುಕಲು ಅದಕ್ಕೆ ಯಶಸ್ಸು ಸಿಗುತ್ತದೆ ಎಂಬುದು ಸಮಾಜದ ಸಕಾರಾತ್ಮಕ ಮನಸ್ಸುಗಳ ಅಭಿಪ್ರಾಯ.
ಯಾರೋ ಒಬ್ಬನಿಂದ ಎಷ್ಟು ದಿನ ಬೆದರಿಸಿ ಹೆದರಿಸಿ ಹಣ ವಸುಲಿ ಮಾಡಲು ಸಾಧ್ಯ. ಒಂದಲ್ಲ ಒಂದು ದಿನ ಆತ ತಿರುಗಿ ಬಿದ್ದರೆ ನೀವು ಉಳಿಯುವುದು ಕಷ್ಟ ಸಾಧ್ಯವಾಗುತ್ತದೆ ಎಂಬುದು ಮತ್ತೊಂದು ಬಗೆಯ ಹೇಳಿಕೆ. ಏನೋ ತಪ್ಪಿಗೆ ಇನ್ನೇನು ಶಿಕ್ಷೆ ಎಂಬಂತೆ ಒಂದಿಷ್ಟು ಕೊಟ್ಟು ಸರಿಪಡಿಸಿಕೊಳ್ಳುವ ವ್ಯವಹಾರವನ್ನು ಕೆಲವರು ಹೊಂದಿರುತ್ತಾರೆ. ಅವರ ಹತಾಶೆಯನ್ನು ಅಥವಾ ಅವರ ಅಕ್ರಮವನ್ನು ಮುಂದಿಟ್ಟುಕೊಂಡು ಅದನ್ನೇ ಕಸುಬಾಗಿ ಮಾಡಿಕೊಂಡರೆ ನೀವು ನಿರ್ನಾಮವಾಗಿ ಬಿಡುತ್ತೀರಿ ಎಂಬುದು ಸಾರ್ವಜನಿಕ ಅಭಿಪ್ರಾಯವಲ್ಲವೇ? (ಮುಂದುವರೆಯುತ್ತದೆ)