ಶಿವಮೊಗ್ಗ ಜ.24 : ಆನೆಗಳ ಹಾವಳಿಯಿಂದ ರೈತರಿಗೆ ಸಂಕಷ್ಟ / ಪಟಾಕಿ ಸಿಡಿಸಿ ಊರಿಂದ ಓಡಿಸುವ ನಾಟಕ: ರೈತರ ಬೆಳೆ ನಾಶ ಮಾಡುತ್ತಿರುವ ಆನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮಲೆನಾಡು ಪ್ರದೇಶದ ರೈತರು ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಪ್ರತಿನಿತ್ಯ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿದೆ. ಬಸವಾಪುರದ ರೈತ ತಿಮ್ಮಪ್ಪನ ಪ್ರಾಣವನ್ನು ಆನೆಗಳು ಬಲಿ ಪಡೆದಿವೆ. ರೈತರು ಪ್ರಾಣ ಭಯದಿಂದ ಓಡಾಡುವ ಸ್ಥಿತಿ ಎದುರಾಗಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ, ಅರಣ್ಯ ಸಚಿವರಿಗೆ ಮತ್ತು ಸರ್ಕಾರಕ್ಕೆ ಅನೇಕ ಬಾರಿ ದೂರು ನೀಡಲಾಗಿದೆ. ಸದನದಲ್ಲೂ ಚರ್ಚೆಯಾಗಿದೆ. ರೈತರ ಪ್ರಾಣ ಬಲಿಯಾಗುತ್ತಿದ್ದರೂ, ಸರ್ಕಾರ ಹಾಗೂ ಅರಣ್ಯಾಧಿಕಾರಿಗಳು ತೋರುತ್ತಿರುವ ದಿವ್ಯ ನಿರ್ಲಕ್ಷ್ಯ ಖಂಡಿಸಿ ಅನಿವಾರ್ಯವಾಗಿ ಸಮಸ್ಯೆ ಬಗೆಹರಿಯುವವರೆಗೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ವೀರೇಶ್ ಹಾಲವಳ್ಳಿ ಮಾತನಾಡಿ, ಶಾಶ್ವತ ಪರಿಹಾರ ಸಿಗುವವರೆಗೆ ನಾವು ಹೋರಾಟ ಮುಂದುವರೆಸುತ್ತೇವೆ. ಅನೇಕ ರೈತರ ಮೇಲೆ ಆನೆಗಳು ದಾಳಿ ಮಾಡಿವೆ. ಇತ್ತೀಚೆಗೆ ದೇವೇಂದ್ರಪ್ಪ ಎಂಬ ರೈತ ಕೂಡ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಬಿಜೆಪಿ ಶಾಸಕರು ಸದನದಲ್ಲಿ ಹೋರಾಟ ಮಾಡಿದ್ದರ ಫಲವಾಗಿ 15 ಲಕ್ಷ ರೂ. ಘೋಷಣೆ ಮಾಡಿದ್ದರೂ ಕೂಡ ಹೊಲಸು ರಾಜಕಾರಣದಿಂದಾಗಿ ಶಾಸಕರು ಊರಲ್ಲಿಲ್ಲ ಎಂಬ ಕಾರಣಕ್ಕೆ ಪರಿಹಾರ ನೀಡಲು ಬಡ ರೈತನ ಕುಟುಂಬಕ್ಕೆ ಎರಡು ತಿಂಗಳು ವಿಳಂಬ ಮಾಡಿದ್ದಾರೆ ಎಂದು ದೂರಿದರು.
ರೈತರ ಬದುಕಿನ ಜೊತೆಗೆ ಚೆಲ್ಲಾಟ ಬೇಡ, ರೈತ ರೊಚ್ಚಿಗೆದ್ದರೆ ಜನಪ್ರತಿನಿಧಿಗಳು ಊರು ಬಿಡುವ ಪರಿಸ್ಥಿತಿ ಬರುತ್ತದೆ. ರೈತರ ಸಹನೆಗೂ ಮಿತಿ ಇದೆ. ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ ಈ ಊರಿನಿಂದ ಆ ಊರಿಗೆ ಆನೆಗಳನ್ನು ಓಡಿಸುವ ನಾಟಕ ಮಾಡುತ್ತಿದ್ದಾರೆ. ಶಾಶ್ವತವಾಗಿ ಆನೆಗಳನ್ನು ಸ್ಥಳಾಂತರಿಸಬೇಕು. ಬೆಳೆಹಾನಿ ಪರಿಹಾರ ನೀಡಿ ರೈತರಿಗೆ ಧೈರ್ಯ ತುಂಬಬೇಕು. ಮೃತ ಮತ್ತು ಗಾಯಾಳು ರೈತರ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್. ಅರುಣ್, ಮಾಜಿ ಶಾಸಕರಾದ ಸ್ವಾಮಿರಾವ್, ಕೆ.ಬಿ. ಅಶೋಕ್ ನಾಯ್ಕ್, ಟಿ.ಡಿ. ಮೇಘರಾಜ್, ಹೊನಗೋಡು ರತ್ನಾಕರ್, ವಿನ್ಸೆಂಟ್ ರೋಡ್ರಿಗಸ್, ದತ್ತಾತ್ರಿ, ಮೋಹನ್ ರೆಡ್ಡಿ, ಸುಮಾ ಭೂಪಾಳಂ, ಹರೀಶ್, ನಾಗಾರ್ಜುನ ಸ್ವಾಮಿ, ಸತೀಶ್ ಎನ್., ಉಮೇಶ್ ಕಡೆಗದ್ದೆ, ದೇವರಾಜ್ ಬಸವಾಪುರ, ಆದರ್ಶ್ ಕಲ್ಲೂರು, ದಿವಾಕರ ಬೆಳ್ಳೂರು ಮೊದಲಾದವರಿದ್ದರು.