ಶಿವಮೊಗ್ಗ ಜ.24:: 75ನೇ ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಪಂಚಾಯಿತಿ, ತೋಟಗಾರಿಗೆ ಇಲಾಖೆ, ಹಾಗೂ ಜಿಲ್ಲಾ ಉದ್ಯಾನ ಕಲಾಸಂಘ ಇವರ ಸಹಯೋಗದೊಂದಿಗೆ ಇಂದಿನಿಂದ ಮೂರು ದಿನಗಳ ಕಾಲ ಅಲ್ಲಮಪ್ರಭು ಪಾರ್ಕ್ ಉದ್ಯಾನವನದಲ್ಲಿ ಮಲೆನಾಡು ಕರಕುಶಲ ಉತ್ಸವ ಹಾಗೂ ಪುಷ್ಪಸಿರಿ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ನೋಡುಗರ ಮನಸೂರೆಗೊಂಡಿದೆ.
ರಾಷ್ಟ್ರಕವಿ ಕುವೆಂಪು ಅವರ ಕವಿಶೈಲದ ಮನೆ ಮಾದರಿ, ಕುವೆಂಪು ಪುತ್ಥಳಿ, ಬೃಹತ್ ಗಾತ್ರದ ಪುಷ್ಪಾಲಂಕೃತ ನವಿಲು, ಚಂದ್ರಗುತ್ತಿ ರೇಣುಕಾಂಬ ದೇವಾಲಯ, ಐ ಲವ್ ಯು ಶಿವಮೊಗ್ಗ ಕಲಾಕೃತಿ, ಬಿದಿರಿನ ಬುಟ್ಟಿಗಳು, ಮಣ್ಣಿನ ವಿವಿಧ ಕಲಾಕೃತಿಗಳು, ವಿವಿಧ ಬೆಗೆಯ ಫಲ ಪುಷ್ಪಗಳು, ತರಕಾರಿಗಳು, ಮೀನಿನ ಅಕ್ವೇರಿಯಂ, ವಿವಿಧ ತಳಿಯ ತರಕಾರಿ, ಹೂವಿನ ಬೀಜಗಳು, ಸಹಕಾರಿ ಸಂಘಗಳಿಂದ ನೂರಾರು ಮಳಿಗೆಗಳಲ್ಲಿ ತಿಂಡಿ ತಿನಿಸುಗಳ ಪ್ರದರ್ಶನ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅದರಲ್ಲೂ ತರಕಾರಿ, ಹಣ್ಣು, ಹೂವುಗಳನ್ನು ಬಳಸಿ ವಿವಿಧ ಕಲಾಕೃತಿ ರಚಿಸಿದ್ದು, ಮಕ್ಕಳು ಹಾಗೂ ನೋಡುಗರನ್ನು ಸೆಳೆದಿವೆ. ಆಕರ್ಷಕ ವೈವಿಧ್ಯಮಯ ರಂಗೋಲಿಗಳು ಕೂಡ ನೋಡುಗರನ್ನು ಸೆಳೆದಿವೆ. ಹಸೆ ಚಿತ್ತಾರ, ಟೆರ್ರಾಕೊಟ್ಟ(ಸುಡಾವೆ ಮಣ್ಣು) ಶಿಲ್ಪಕಲಾ ಉತ್ಪನ್ನಗಳು, ಗುಡಿ ಕೈಗಾರಿಕೆ ಮತ್ತು ವೈಯರ್ ಬ್ಯಾಗ್ ಗಳು, ಗೃಹ ಅಲಂಕಾರಿಕಾ ವಸ್ತುಗಳು, ಹೀಗೆ ಹತ್ತು ಹಲವು ಬಗೆಯ ವಸ್ತುಗಳನ್ನು ಪ್ರದರ್ಶನದಲ್ಲಿವೆ. ಸ್ವಸಹಾಯ ಸಂಘದ ಸದಸ್ಯರಿಗೆ ವಿವಿಧ ಯೋಜನೆಗಳಡಿಯಲ್ಲಿ ಅವಕಾಶ ನೀಡಲಾಗಿದೆ.
ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, 34 ವಿವಿಧ ಉತ್ಪನ್ನಗಳ ಮಳಿಗೆಗಳು ಹಾಗೂ ವಿವಿಧ ಇಲಾಖೆಗಳ 25 ಮಳಿಗೆಗಳನ್ನು ಸ್ಥಾಪಿಸಲಾಗಿದೆ.ಮೊದಲ ದಿನವೇ ಜನಸಾಗರವೇ ಹರಿದು ಬರಲಾಂಭಿಸಿದೆ. ಶಾಲಾ ಮಕ್ಕಳು ಕೂಡ ಸರದಿಯಲ್ಲಿ ಆಗಮಿಸಿ ಪ್ರದರ್ಶನ ವೀಕ್ಷಿಸಿದರು.