:ಶಿವಮೊಗ್ಗ, ಜ.24 :
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ತಾಲೂಕು ಘಟಕದ ವತಿಯಿಂದ ಜ. ೨೫ ಮತ್ತು ೨೬ರಂದು ವೆಂಕಟೇಶನಗರದ ಬಸವಕೇಂದ್ರದಲ್ಲಿ ಶರಣ ಸಾಹಿತ್ಯ ಸಮ್ಮೇಳನ ಹಾಗೂ ೧೦೦ನೇ ವಚನ ಮಂಟಪ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆರ್.ಎಸ್. ಸ್ವಾಮಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ. ೨೫ರಂದು ಸಂಜೆ ೬ ಗಂಟೆಗೆ ಬಸವಕೇಂದ್ರದ ಡಾ. ಬಸವಮರುಳಸಿದ್ಧ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಚನ ಮಂಟಪ ೧೦೦ನೇ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಕಲಬುರಗಿ ಚಿಗರಹಳ್ಳಿ ಮರುಳಶಂಕರ ದೇವರ ಗುರುಪೀಠದ ಸಿದ್ಧಬಸವ ಕಬೀರ ಮಹಾಸ್ವಾಮಿ ಗಳು ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಎನ್. ಮಹಾರುದ್ರ, ಅಕ್ಕನ ಬಳಗದ ಅಧ್ಯಕ್ಷೆ ಜಯಮ್ಮ ಕುಬಸದ್, ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ, ಕದಳಿ ವೇದಿಕೆ ಶಿವಮೊಗ್ಗ ಅಧ್ಯಕ್ಷೆ ಅರುಣಾ ಚಂದ್ರಶೇಖರ್, ಮುಂತಾದವರು ಉಪಸ್ಥಿತರಿದ್ದು, ವಿವಿಧ ಬಡಾವಣೆಗಳ ವಚನ ಬಳಗದ ಬಂಧುಗಳು ಕಾರ್ಯಕ್ರಮ ನಡೆಸಿಕೊಡುವರು ಎಂದರು.
ಜ. ೨೬ರಂದು ಭಾನುವಾರ ಬೆಳಗ್ಗೆ ೮.೩೦ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ೯.೧೫ಕ್ಕೆ ಸಮ್ಮೇಳನಾಧ್ಯಕ್ಷರನ್ನು ಬರಮಾಡಿಕೊಳ್ಳಲಾಗುವುದು. ನಂತರ ವನಚ ಗಾಯನ ನಡೆಯಲಿದೆ. ಬೆಳಗ್ಗೆ ೧೦ ಗಂಟೆಗೆ ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟ ಬೆಕ್ಕಿನ ಕಲ್ಮಠ ಶ್ರೀಗಳಾದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಗಮಕ ಕಲಾಶ್ರೀ ವಿದ್ವಾನ್
ಎಂ.ಜಿ. ಸಿದ್ಧರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಸಮ್ಮೇಳನದ ಅಧ್ಯಕ್ಷೆ ದಾಕ್ಷಾಯಿಣಿ ಜಯದೇವಪ್ಪ ಉಪಸ್ಥಿತರಿರುವರು ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಎಸ್. ರುದ್ರೇಗೌಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಎಸ್.ಎಸ್. ಜ್ಯೋತಿ ಪ್ರಕಾಶ್, ಪ್ರೊ.ಸಿ.ಯು. ಸೋಮಶೇಖರ್, ಹೆಚ್. ಎನ್. ಮಹಾರುದ್ರ ಉಪಸ್ಥಿತರಿರುವರು ಎಂದರು.
ಮಧ್ಯಾಹ್ನ ಅನುಭವ ಮಂಟಪ -೧ರಲ್ಲಿ ಹಿರಿಯ ಉಪನ್ಯಾಸಕ ಡಾ.ಜಿ.ವಿ. ಹರಿಪ್ರಸಾದ್, ದಯವೇ ಧರ್ಮದ ಮೂಲವಯ್ಯ ಕುರಿತು, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜೆ.ಎಸ್. ಸದಾನಂದ ವಚನಗಳು ಅಂದು-ಇಂದು ಕುರಿತು ಉಪನ್ಯಾಸ ನೀಡುವರು. ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಆಧುನಿಕ ವಚನಗಳ ಕುರಿತು, ಪ್ರೊ. ಕಿರಣ್ ದೇಸಾಯಿ ಅವರು ದಾಕ್ಷಾಯಿಣಿ ಜಯದೇವಪ್ಪನವರ ವಚನಗಳ ಕುರಿತು ವಿಷಯ ಮಂಡಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಎನ್. ಮಹಾರುದ್ರ, ಜಿ. ಬೆನಕಪ್ಪ ಇದ್ದರು.