ಶಿವಮೊಗ್ಗ : ಜ. 4: : ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ವ್ಯಾಪ್ತಿ ಒಳಪಡುವ ಭದ್ರಾ ಎಡದಂಡೆ ನಾಲೆಯ ಅನುಕೂಲಕ್ಕಾಗಿ ಇಂದಿನಿಂದಲೇ ಅನ್ವಯಗಳುವಂತೆ ಮುಂದಿನ 120 ದಿನಗಳ ಕಾಲ ನಿರಂತರವಾಗಿ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಂಶುಮಂತ್ ಅವರು ಹೇಳಿದರು.
ಅವರು ಇಂದು ಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು, ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಅಚ್ಚು ಕಟ್ಟು ಪ್ರದೇಶ ಅಭಿವೃದ್ಧಿ ವ್ಯಾಪ್ತಿಯ ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ರೈತ ಮುಖಂಡರುಗಳ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದ್ದ ಭದ್ರಾ ಅಚ್ಚುಕಟ್ಟು ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ರೈತರ ಹಿತ ಕಾಯುವ ಬಹುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮುಂದಿನ 100 ರಿಂದ 120 ದಿನಗಳ ಕಾಲ ಭದ್ರಾ ಎಡದಂಡೆ ನಾಲಿಗೆ ಇಂದಿನಿಂದಲೇ ಹಾಗೂ ಜನವರಿ 8ರ ನಂತರ ನಿರಂತರವಾಗಿ ನೀರುಹರಿಸಲಾಗುವುದು ಎಂದ ಅವರು, ಈ ಸಂಬಂಧ ಈಗಾಗಲೇ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ರೈತರು ಯಾವುದೇ ವದಂತಿಗಳಿಗೆ ಕಿವಿಕೊಡದೆ ಆತಂಕಕ್ಕೆ ಒಳಗಾಗದಿರುವಂತೆ ಅವರು ಮನವಿ ಮಾಡಿದರು.
ಇಂದು ನಡೆದ 86ನೇ ನೀರಾವರಿ ಸಲಹಾ ಸಮಿತಿಯ ಸಭೆಯ ನಿರ್ಣಯದಂತೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರು ತಮ್ಮ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳನ್ನು ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ ಅವರು, ಮಂಡಳಿಯು ರೈತರ ಅನುಕೂಲಕ್ಕಾಗಿ ಹಾಗೂ ರೈತರ ಹಿತ ಕಾಯುವ ನಿಟ್ಟಿನಲ್ಲಿ ಸಕಾಲಿಕ ನಿರ್ಣಯ ಕೈಗೊಂಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸಕಾಲಿಕವಾಗಿ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದರು.
ಪ್ರಸ್ತುತ ಜಲಾಶಯದಲ್ಲಿ 66. 96 ಟಿಎಂಸಿ ನೀರಿನಾ ಲಭ್ಯತೆ ಇದ್ದು ಮುಂದಿನ 120 ದಿನಗಳ ಅವಧಿಯಲ್ಲಿ 32 ಟಿಎಂಸಿ ನೀರು ಹರಿಸಲಾಗುವುದು. ನೀರಿನ ಮಿತ ಹಾಗೂ ಸದ್ಬಳಕೆಯ ಕುರಿತಂತೆ ಕಾಲಕಾಲಕ್ಕೆ ಅಧಿಕಾರಿಗಳ, ತಜ್ಞರ, ರೈತ ಮುಖಂಡರು ಉಪಸ್ಥಿತಿಯಲ್ಲಿ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್ ಬಾನು, ಕಾಡ ಆಡಳಿತ ಅಧಿಕಾರಿ ಸತೀಶ್, ತಾಂತ್ರಿಕ ಅಧಿಕಾರಿ ಪ್ರಶಾಂತ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು