ಬೆಂಗಳೂರು, ಜ, 4 ; ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಅತ್ಯಂತ ಅಗತ್ಯವಾಗಿದ್ದು, ಸೂಕ್ತ ಪ್ರೋತ್ಸಾಹ ನೀಡಿದರೆ ಉತ್ತಮ ಪ್ರತಿಭೆಗಳನ್ನು ಸೃಷ್ಟಿಸಲು ಸಾಧ್ಯ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ದಿ ನ್ಯಾಷನಲ್ ಎಜುಕೇಶನ್ ಸೊಸೈಟಿಯಿಂದ ವಿಜ್ಞಾನ ಪ್ರದರ್ಶನ  ಎನ್ಇ ಸೂಪರ್ ನೋವಾ 2.0 ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಪ್ರತಿಭೆಗಳಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮೇಳ ಆಯೋಜಿಸುತ್ತಿದ್ದು, ಅತ್ಯುತ್ತಮ ವಿಜ್ಞಾನ ಮಾದರಿಗಳನ್ನು ನಿರ್ಮಿಸಿ ಪ್ರದರ್ಶಿಸುವುದನ್ನು ಕಂಡು ವಿಸ್ಮುಯಗೊಂಡಿದ್ದೇನೆ. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ.  ಆದರೆ ಪ್ರತಿಭಾವಂತರಿಗೆ ಇಂತಹ ವಿಜ್ಞಾನ ಪ್ರದರ್ಶನಗಳು ಸೂಕ್ತ ವೇದಿಕೆ ಒದಗಿಸಬೇಕು ಎಂದರು.

ನ್ಯಾಷನಲ್ ಕಾಲೇಜು ಬಹು ಹಿಂದಿನಿಂದಲೂ ವೈಜ್ಞಾನಿಕ ಮನೋಭಾವನೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಹಿಂದಿನ ಗತ ವೈಭವವನ್ನು ಮತ್ತೆ ಮರಳಿ ತರಲು ಪ್ರಯತ್ನಿಸಬೇಕು. ಅನೇಕ ಮಹನೀಯರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು, ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಶಾರ್ ಗಿರಿನಾಥ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದಲ್ಲಿ ನೊಬೆಲ್ ಪುರಸ್ಕಾರ ಪಡೆಯುವಷ್ಟು ಪ್ರತಿಭೆಗಳಿದ್ದು, ಸೂಕ್ತ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಲಿಕೆ ಅನುಭವ ಆಧಾರಿತವಾಗಿರಬೇಕು. ದುರದೃಷ್ಟಕರವೆಂದರೆ ವಿಜ್ಞಾನ ಕಲಿತಿದ್ದರೂ ತಮ್ಮ ದೈನಂದಿನ ಬದುಕು, ಕೆಲಸದಲ್ಲಿ ವೈಜ್ಞಾನಿಕ ಚಿಂತನೆ ಅಳವಡಿಸಿಕೊಂಡಿರುವುದಿಲ್ಲ. ವಿಜ್ಞಾನದ ಪ್ರಯೋಜನಗಳನ್ನು ಎಲ್ಲಾ ಹಂತಗಳಲ್ಲಿ ಬಳಸಿಕೊಳ್ಳುವುದು ಅಗತ್ಯವಿದೆ ಎಂದು ಹೇಳಿದರು. 

ಎನ್ಇಎಸ್ ಸಂಸ್ಥೆ ಕಾರ್ಯದರ್ಶಿ ವಿ. ವೆಂಕಟಶಿವಾರೆಡ್ಡಿ ಮಾತನಾಡಿ, ಈ ಬಾರಿ ವಿಜ್ಞಾನ ಪ್ರದರ್ಶನ ಅತ್ಯಂತ ವಿನೂತನವಾಗಿದ್ದು, ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಉತ್ತಮ ವೇದಿಕೆಯಾಗಿದೆ. ಈ ಬಾರಿ 350 ಕ್ಕೂ ಅಧಿಕ ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ. ಭಾರತೀಯ ವಿಜ್ಞಾನ ಮಂದಿರ, ನೆಹರು ತಾರಾಲಯ, ನಿಮ್ಹಾನ್ಸ್ ಒಳಗೊಂಡಂತೆ 60 ಕ್ಕೂ ಅಧಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಹೇಳಿದರು.  

ಸಂಸ್ಥೆಯ ಅಧ್ಯಕ್ಷರಾದ ಡಾ.ಎಚ್.ಎನ್. ಸುಬ್ರಮಣ್ಯ, ಉಪಾಧ್ಯಕ್ಷರಾದ ವೈ.ಜಿ. ಮಧುಸೂಧನ್, ಕಾರ್ಯದರ್ಶಿ ಬಿ.ಎಸ್. ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸುಧಾಕರ್ ಇಸ್ತೂರಿ,  ಸಹ ಉಪಾಧ್ಯಕ್ಷರಾದ ವಿ. ಮಂಜುನಾಥ್, ಡಾ. ಪಿ ಎಲ್ ವೆಂಕಟರಾಮ ರೆಡ್ಡಿ, ರಾಮ್ ಮೋಹನ್ ಕೆ ಎನ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!