ಶಿವಮೊಗ್ಗ ಡಿ.18 ಬೆಳಗಾವಿ: ಅತಿಥಿ ಉಪನ್ಯಾಸಕರು ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಧರಣಿ ನಡೆಸುತ್ತಿದ್ದ ವೇಳೆ ಅಸ್ವಸ್ಥಗೊಂಡ ಅತಿಥಿ ಉಪನ್ಯಾಸಕಿಗೆ ಪ್ರಥಮ ಚಿಕಿತ್ಸೆ ನೀಡಿ, ಖುದ್ದು ತಾವೇ ಬೆಳಗಾವಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅವರು ಕರ್ತವ್ಯ ಪ್ರಜ್ಞೆಯ ಜೊತೆಗೆ ಮಾನವೀಯತೆ ಮರೆದಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ 154ನೇ ವಿಧಾನಪರಿಷತ್ ಅಧಿವೇಶನ ನಡೆಯುತ್ತಿದ್ದ ವೇಳೆ ಸುವರ್ಣ ವಿಧಾನ ಸೌಧದ ಮುಂಭಾಗ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಧರಣಿ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅವರು ಮನವಿಯನ್ನು ಸ್ವೀಕರಿಸಿ, ಅತಿಥಿ ಉಪನ್ಯಾಸಕರ ಗೌರವ ಧನವನ್ನು ಹೆಚ್ಚಳ ಮಾಡುವಂತೆ
ಈಗಾಗಲೇ ಅಧಿವೇಶನದಲ್ಲಿ ಚರ್ಚೆ ಮಾಡಲಾಗಿದ್ದು ಹಾಗೂ ಈ ಸಂಬಂದ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಜೊತೆ ಸಭೆ ಕೂಡ ನಡೆಸಲಾಗಿದೆ. ಸಚಿವರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಧರಣಿ ನಿರತರನ್ನು ಕುರಿತು
ಮಾತನಾಡುವ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕಿಯೊಬ್ಬರು ದಿಢೀರನೇ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಡಾ.ಧನಂಜಯ ಸರ್ಜಿ ಅವರು ಸ್ಥಳದ್ಲಲೇ ಪ್ರಥಮ ಚಿಕಿತ್ಸೆ ನೀಡಿ, ಖುದ್ದು ತಾವೇ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಕರ್ತವ್ಯ ಪ್ರಜ್ಞೆ ಮರೆದರು.