ಶಿವಮೊಗ್ಗ, ಫೆ.೧೧:
ಅಕ್ರಮವಾಗಿ ಗಾಂಜಾ ಸರಬರಾಜು ಮಾಡುವ ಜೊತೆಗೆ ಮಾರಾಟ ಮಾಡಿ ಬದುಕುತ್ತಿದ್ದವರನ್ನು ಒಂದೆಡೆ ಸೇರಿಸಿದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್ ಅವರು ಇನ್ಮುಂದೆ ಗಾಂಜಾ ಸರಬರಾಜು ಅಥವಾ ವ್ಯಾಪಾರ ದಂಧೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದರೆ ಕಥೆಯೇ ಬೇರೆ ಎಂದು ಖಡಕ್ ವಾರ್ನಿಂಗ್ ನೀಡುವ ಮೂಲಕ ಎಚ್ಚರಿಕೆ ಗಂಟೆ ಭಾರಿಸಿದ್ದಾರೆ.
ಇದನ್ನು ತಮ್ಮ ಕಾರ್ಯಕ್ರಮಗಳ ಜೊತೆಗೆ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮುಂದೆಯೂ ಸಹ ಈ ದಂಧೆಯನ್ನು ಮಾಡುವುದು ಕಂಡು ಬಂದರೆ ನಿಮ್ಮ ವಿರುದ್ಧದ ದೂರಿನಲ್ಲಿ ಜಾಮೀನು ಸಹ ಸಿಗದಂತೆ ನೋಡಿಕೊಳ್ಳಬೇಕಾಗುತ್ತದೆ ಇದು ಕೊನೆಯ ವಾರ್ನಿಂಗ್ ಎಂದು ಅವರು ಇಂದು ಅಕ್ರಮ ಗಾಂಜಾ ದಂಧೆಕೋರರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಇಂದು ಶಿವಮೊಗ್ಗ ಉಪವಿಭಾಗದ ೮೯ ಅಕ್ರಮ ಗಾಂಜಾ ಮಾರಾಟಗಾರರ (ಈ ದಂಧೆಯಲ್ಲಿ ಈಗಾಗಲೇ ಸಿಲುಕಿರುವವರು) ಪೆರೇಡ್ ನಡೆಸಿ ಯಾವುದೇ ಗಾಂಜಾ ಪ್ರಕರಣ ಕಂಡು ಬಂದಲ್ಲಿ ನೀವೆ ಮಾಹಿತಿ ನೀಡಬೇಕು. ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳಬಾರದು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ.ಶಾಂತರಾಜ್ ಸಾಮಾಜಿಕ ಪಿಡುಗಾಗಿರುವ ಗಾಂಜಾವನ್ನು ಮಾರಾಟ ಮಾಡಬಾರದು. ಗಾಂಜಾ ಮಾರಾಟ ಮಾಡುವ ಯಾವುದೇ ಸುಳಿವುಗಳಿದ್ದರು ಸಾರ್ವಜನಿಕರು ಭಯ ಪಡದೇ ಮಾಹಿತಿ ನೀಡಬೇಕು ಎಂದು ಹೇಳಿಿದರು.
ನಿನ್ನೆ ಭದ್ರಾವತಿ ಉಪವಿಭಾಗದಲ್ಲಿ ೩೨ ಗಾಂಜಾ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಭದ್ರಾವತಿ ಡಿ.ವೈ.ಎಸ್.ಪಿ. ನೇತೃತ್ವದಲ್ಲಿ ಈ ಹಿಂದೆ ಕೇಸು ದಾಖಲಾಗಿದ್ದವರ ಕರೆಸಿ ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ತಿಳಿಸಲಾಗಿದೆ. ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಸೀನ್ ಎಂಬುವನನ್ನು ಬಂಧಿಸಿ ೭೦೦ ಗ್ರಾಂ. ಗಾಂಜಾ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಗಾಂಜಾ ಮಾರಾಟದ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ತಮ್ಮ ಮೊ:೯೪೮೦೮ ೦೩೩೦೧ ಗೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.
ಸ್ಫೋಟ ಪ್ರಕರಣದ 9ನೇ ಆರೋಪಿ ಬಂಧನ
ಶಿವಮೊಗ್ಗ ತಾಲ್ಲೂಕು ಕಲ್ಲುಕ್ವಾರೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ೯ನೇ ಆರೋಪಿಯನ್ನು ಇಂದು ಬಂಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ರಾಮುಲುವಿನ ಇನ್ನೊಬ್ಬ ಪುತ್ರ ಪೃಥ್ವಿರಾಜ್ಸಾಯಿಯನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ನಿವಾಸಿಯಾಗಿರುವ ಪೃಥ್ವಿರಾಜ್ ಸಾಯಿಯನ್ನು ಅನಂತರಪುರ ಜಿಲ್ಲೆಯ ಕಲ್ಯಾಣದುರ್ಗ ದಲ್ಲಿ ಬಂಧಿಸಲಾಗಿದೆ ಎಂದು ಎಸ್.ಪಿ.ಶಾಂತರಾಜ್ ತಿಳಿಸಿದರು.