ಸುನೀತಾ ಅಣ್ಣಪ್ಪಗೆ ಅವಕಾಶ ಸಾಧ್ಯತೆ, ಉಪಮೇಯರ್‌ಗಿರಿಗೆ ಪೈಪೋಟಿ


ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಚುಕ್ಕಾಣಿಯನ್ನು ಎಂ.ಕಾಂ.ಪದವಿಧರೆ ಹಾಗೂ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿರುವ ಸದಸ್ಯೆ ಸುನೀತಾ ಅಣ್ಣಪ್ಪ ಹಿಡಿಯುವುದು ಖಚಿತವೆನ್ನಲಾಗಿದೆ.
ನಿನ್ನೆ ರಾತ್ರಿ ಕರ್ನಾಟಕ ರಾಜ್ಯ ಸರ್ಕಾರ ೧೦ ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದು, ಶಿವಮೊಗ್ಗ ಮೇಯರ್ ಆಗಿ ಬಿಸಿಎ ಮಹಿಳೆ, ಉಪಮೇಯರ್ ಆಗಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ದೊರೆತಿದೆ.


ಹಾಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಆ ಪಕ್ಷದಲ್ಲಿನ ೬ ಮಹಿಳಾ ಸದಸ್ಯರಿಗೆ ಈಗ ಮೇಯರ್ ಆಗುವ ಅವಕಾಶ ದೊರೆತಿದೆ. ಆದರೂ ಕಳೆದ ಮೂರು ಭಾರಿ ಶಿವಮೊಗ್ಗ ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಸದಸ್ಯೆಯಾಗಿ ಕರ್ತವ್ಯ ನಿರ್ವಹಿಸಿರುವ ಸುನೀತಾ ಅಣ್ಣಪ್ಪ ಅವರಿಗೆ ಈ ಸ್ಥಾನ ದೊರೆಯುವುದು ಖಚಿತವೆನ್ನಲಾಗಿದೆ. ಉಳಿದಂತೆ ಈ ಸ್ಥಾನದ ಅವಕಾಶವನ್ನು ಪಡೆಯಬಹುದಾದ ಸದಸ್ಯೆಯರೆಂದರೆ ಕಲ್ಪನಾ ರಮೇಶ್, ಲಕ್ಷ್ಮೀ ಶಂಕರನಾಯ್ಕ, ಭಾನುಮತಿ ವಿನೋದ್, ಆಶಾ ಚಂದ್ರಪ್ಪ, ಆರತಿ ಪ್ರಕಾಶ್ ಅವರಿಗೆ ಈ ಅವಕಾಶ ದೊರೆಯಲಿದೆ.


ಶಿವಮೊಗ್ಗದಲ್ಲಿ ಕಳೆದ ೧೫ ವರ್ಷಗಳಿಂದ ನಗರ ಆಡಳಿತದ ಜೊತೆ ಬೆರೆತಿರುವ ೨೯ನೇ ವಾರ್ಡ್‌ನ ಸದಸ್ಯೆ ಸುನೀತಾ ಅವರು ವಿಶೇಷವಾಗಿ ಡಿಪ್ಲೋಮಾ ಇಂಜಿನಿಯರಿಂಗ್ ಪದವಿ ಮುಗಿಸಿದವರಾಗಿದ್ದಾರೆ. ಜೊತೆಗೆ ಎಂ.ಕಾಂ., ವ್ಯಾಸಾಂಗ ಮಾಡಿರುವ ಸುನೀತಾ ಅಣ್ಣಪ್ಪ ಬಹುತೇಕ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯುವ ಸದಸ್ಯೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯೂ ಆಗಿರುವ ಸುನೀತಾ. ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಠದ ಸದಸ್ಯೆಯಾಗಿದ್ದಾರೆ. ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ, ಸೂಡಾ ಸದಸ್ಯೆಯಾಗಿ ಹಲವು ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸಿರುವುದು ಅವರಿಗೆ ಈಗ ವರದಾನವಾಗಲಿದೆ. ಅವರ ಪತಿ ಕೆ.ವಿ.ಅಣ್ಣಪ್ಪ ಅವರು ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕರಾಗಿದ್ದು, ಶಿವಮೊಗ್ಗ ಜಿಲ್ಲಾ ಮೋಗವೀರರ ಸಮಾಜದ ಅಧ್ಯಕ್ಷರೂ ಆಗಿದ್ದಾರೆ.


ಶಿವಮೊಗ್ಗ ಮಹಾನಗರ ಪಾಲಿಕೆಯ ಉಪಮೇಯರ್ ಗಿರಿಗೆ ಭಾರಿ ಪೈಪೋಟಿ ನಡೆದಿರುವುದಂತೂ ಸತ್ಯ. ಪಾಲಿಕೆ ಹಾಗೂ ನಗರಸಭೆಯ ಅನುಭವವೊಂದಿರುವ ಶಂಕರ್ ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವಿಶ್ವನಾಥ್, ಜ್ಞಾನೇಶ್ವರ್, ವಿಶ್ವಾಸ್ ಸೇರಿದಂತೆ ಹಲವರು ಪೈಪೋಟಿ ನಡೆಸಿದ್ದಾರೆ. ಪಕ್ಷದ ಪ್ರಮುಖರು ಕೈಗೊಳ್ಳುವ ನಿರ್ಧಾರದ ಮೇಲೆ ಪಾಲಿಕೆಯ ಚುಕ್ಕಾಣಿ ದೊರಕಲಿದೆ.

By admin

ನಿಮ್ಮದೊಂದು ಉತ್ತರ

error: Content is protected !!