ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ 136 ಸ್ಥಾನ ಪಡೆದ ಕಾಂಗ್ರೆಸ್ ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ಹಣ ಕ್ರೂಢಿಕರಣ ಮಾಡಲಾಗದೆ ಜನದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ,ಜಾರ್ಖಂಡ್ ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ. ರಾಜ್ಯದ ಉಪಚುನಾವಣೆಗಳಲ್ಲಿ 3 ಸ್ಥಾನ ಎನ್ಡಿಎ ಪಾಲಾಗಲಿದೆ. ನಮ್ಮ ಕಾರ್ಯಕರ್ತರು ಅತಿ ಉತ್ಸಾಹದಿಂದ ಮೂರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಆರ್ಎಸ್ಎಸ್ ಬಗ್ಗೆ ಮಾಡಿದ ಟೀಕಿಗೆ ಉತ್ತರಿಸಿದ ಅವರು, ಕಾಂಗ್ರೆಸ್ಗೆ ಭ್ರಮ ನಿರಸನವಾಗಿದೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತೆ ಎಂಬ ಭ್ರಮೆಯಲ್ಲಿದ್ದರು. ಅಧಿಕಾರಕ್ಕೆ ಬಂದಿಲ್ಲ ಎಂದು ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದು, ಖರ್ಗೆಯವರಿಗೆ ಈ ಹೇಳಿಕೆ ಶೋಭೆ ತರುವುದಿಲ್ಲ ಎಂದರು.
ರಾಜ್ಯದ ಕಾಂಗ್ರೆಸ್ ಶಾಸಕರು ಹತಾಶರಾಗಿದ್ದಾರೆ. ಅವರ ಕ್ಷೇತ್ರಕ್ಕೆ ಹೋಗಿ ಮುಖ ತೋರಿಸಲು ಆಗುತ್ತಿಲ್ಲ. ಅನುದಾನ ಬಿಡುಗಡೆಯಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಸಾಕಾಗುತ್ತಿಲ್ಲ, ದಿನೇ ದಿನೇ ಪಕ್ಷದ ಶಾಸಕರಲ್ಲಿ ಅಸಮಧಾನ ಹೆಚ್ಚಾಗುತ್ತಿದೆ. ರಾಜುಕಾಗೆ ಎಂಬ ಶಾಸಕರು ಅನುದಾನ ಬಿಡುಗಡೆಯಾಗುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ. ಇನ್ನೋರ್ವ ಶಾಸಕರು ನಾವು ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದೆ ದೌರ್ಭಾಗ್ಯ ಎಂದಿದ್ದಾರೆ.
ಬಿಪಿಎಲ್ ಕಾರ್ಡ್ ರದ್ಧತಿ ಕೂಡ ಬಡವರ ಮೇಲೆ ಎಳೆದ ಬರೆಯಾಗಿದೆ. ರೈತರ ಮತ್ತು ಬಡವರ ಪರವಾಗಿ ಬಿಜೆಪಿ ಇದ್ದು, ಈ ಬಗ್ಗೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ವಿಪಕ್ಷವಾಗಿ ಹೋರಾಟ ಮಾಡಿ ಬಡವರಿಗೆ ನ್ಯಾಯ ಒದಗಿಸುತ್ತೇವೆ ಎಂದರು.